Slide
Slide
Slide
previous arrow
next arrow

‘ಯಡಳ್ಳಿ ಉತ್ಸವ’: ಮನಸೂರೆಗೊಂಡ ಗಾಯನ-ಸಿತಾರ್ ಜುಗಲ್ಬಂದಿ

300x250 AD

ಶಿರಸಿ: ನೆರೆದಿದ್ದ ಸಾವಿರಾರು ಸಂಗೀತ ಪ್ರಿಯರನ್ನು ಮಧುರ ಗಾನ ಹಾಗೂ ಸಿತಾರ್ ವಾದನದ ಜುಗಲ್ಬಂದಿಯೊಂದಿಗೆ ಹಿಡಿದಿಟ್ಟು, ಸಭೆಯ ಮನ ತಣಿಸಿ ಶ್ಲಾಘನೆಗೆ ಪಾತ್ರವಾದ ಕಾರ್ಯಕ್ರಮವೊಂದು ತಾಲೂಕಿನ ಯಡಳ್ಳಿಯಲ್ಲಿ ನಡೆದಿದೆ.
ಯಡಳ್ಳಿ ಉತ್ಸವದ ಅಂಗವಾಗಿ ಸಂಘಟಿಸಲಾಗಿದ್ದ ಗಾನ- ಸಿತಾರ್ ಜುಗಲ್ಬಂದಿ ಹಾಗು ಗಾನ ವೈವಿಧ್ಯಗಳು ಕಿಕ್ಕಿರಿದ ಸಂಗೀತಾಭಿಮಾನಿಗಳ ಮನಸೂರೆಗೊಳಿಸುವಲ್ಲಿನ ಕಲಾವಿದರ ಶ್ರಮ ಸಾಕಾರಗೊಂಡಿದೆ.

ಅಂತಾರಾಷ್ಟ್ರೀಯ ಗಾಯನ ಖ್ಯಾತಿಯ ಪಂ.ಜಯತೀರ್ಥ ಮೇವುಂಡಿ ತಮ್ಮ ಸಮರ್ಥ ಕಂಠದಲ್ಲಿ ರಾಗ್ ರಾಗಶ್ರೀಯಿಂದ ತಮ್ಮ ಸಂಗೀತ ಕಚೇರಿಯನ್ನು ಆರಂಭಿಸಿದರೆ, ಇದಕ್ಕೆ ಸರಿಯಾಗಿ ಸಿತಾರ್ ವಾದನದಲ್ಲಿ ಖ್ಯಾತ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಸಿತಾರ್ ವಾದನದ ಕೈಚಳಕ ಪ್ರಸ್ತುತ ಪಡಿಸಿದರು. ನಂತರದಲ್ಲಿ ಮೇವುಂಡಿಯವರು ರಾಗ್ ಜೋಗ್ ವಿಸ್ತಾರಗೊಳಿಸಿ, ನಂತರದಲ್ಲಿ ರಫೀಕ್ ಖಾನ್ ಸಂಯೋಜಿಸಿದ ಬಾಲಕೃಷ್ಣನ ಕುರಿತಾದ ಭಜನೆಗಳು ಜುಗಲ್ಬಂದಿಯಾಗಿ ಪ್ರಸ್ತುತಗೊಂಡಾಗ ಸಭೆಯ ಕರತಾಡನ ಮುಗಿಲು ಮುಟ್ಟಿತ್ತು. ತದನಂತರದಲ್ಲಿ ಪಂ.ಮೇವುಂಡಿಯವರು ಭಗವಾನ್ ದತ್ತಾತ್ರೇಯನ ಕುರಿತಾದ ಅಭಂಗಗಳನ್ನು ಹಾಡಿ ಕೊನೆಯಲ್ಲಿ ರಾಗ್ ಭೈರವಿಯೊಂದಿಗೆ ಒಟ್ಟಾರೆ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು. ಜುಗಲ್ಬಂದಿಗೆ ತಬಲಾದಲ್ಲಿ ಸಹಕರಿಸಿದ ವಿ.ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ, ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಹೆಬ್ಬಲಸು ವೈವಿಧ್ಯಮಯವಾಗಿ ನುಡಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದರು. ಹಿನ್ನೆಲೆಯ ತಾನ್ಪುರದಲ್ಲಿ ಲಲಿತ್ ಮೇವುಂಡಿ ಹಾಗು ಯುವ ಗಾಯಕಿ ವಿಭಾ ಹೆಗಡೆ ಯಲ್ಲಾಪುರ ಸಹಕರಿಸಿದರು.

ಪಂ.ಮೇವುಂಡಿಯವರ ಸಂಗೀತ ಕಚೇರಿಯ ಪೂರ್ವದಲ್ಲಿ ಆಯೋಜನೆಗೊಂಡಿದ್ದ ಗಾನ ವೈವಿಧ್ಯದಲ್ಲಿ ಯುವ ಗಾಯಕಿ ಕು. ನೈದಿಲೆ ಹೆಗಡೆ ಹೊರಾಲೆ ರಾಜ್ ನಂದ್’ನ್ನು ಹಾಡಿ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡರು. ನಂತರದಲ್ಲಿ ಜನಪ್ರಿಯ ಹಾಡುಗಳನ್ನು ಪ್ರಸ್ತುತಪಡಿಸುತ್ತ ಠುಮರಿಯೊಂದನ್ನು ಹಾಡಿ ರಂಜಿಸಿದರು. ಇವರಿಗೆ ತಬಲಾದಲ್ಲಿ ವಿ.ಶೇಷಾದ್ರಿ ಅಯ್ಯಂಗಾರ್ ಹೊನ್ನಾವರ ಹಾಗೂ ಸಂವಾದಿನಿಯಲ್ಲಿ ಭರತ್ ಹೆಗಡೆ ಹೆಬ್ಬಲಸು ಸಾಥ್ ನೀಡಿದರು.

300x250 AD

ಒಟ್ಟಾರೆ ಉತ್ಸವವು ಶಾಸ್ತ್ರೀಯ ಸಂಗೀತದ ಮೂಲಕ ಜನರಿಗೆ ಸಂಗೀತ ರಸದೂಟ ಬಡಿಸಿದಂತಿತ್ತು. ಕಾರ್ಯಕ್ರಮ ಸಂಘಟಕ ಗಿರಿಧರ್ ಕಬ್ನಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top