ಕಾರವಾರ: ನಗರದ ಗುರುಭವನ, ಶಾಸಕರ ಮಾದರಿ ಶಾಲೆ, ಸರ್ಕಾರಿ ಮಹಿಳಾ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ವಿವಿಧ ಗ್ರಾಮ ಪಂಚಾಯತಿಗಳಲ್ಲಿ 11 ಶಾಲಾ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗೆ ಮಾಲಾದೇವಿ ಮೈದಾನದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮತ್ತು ಸಕಾಲ ಸಚಿವ ಬಿ.ಸಿ.ನಾಗೇಶ್ ಶಂಕುಸ್ಥಾಪನೆ ನೆರೆವೇರಿಸಿದರು.
ನಂತರದಲ್ಲಿ ಮಾತನಾಡಿದ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ನಾವೆಲ್ಲರೂ ಪ್ರಯತ್ನಿಸೋಣ. ಸರ್ಕಾರ ಪ್ರತಿ ಹಂತದಲ್ಲೂ ಶಿಕ್ಷಣಕ್ಕೆ ಸಾಕಷ್ಟು ಒತ್ತು ನೀಡುತ್ತಾ ಬಂದಿದೆ. ಶಿಕ್ಷಣವು ಪರಾವಲಂಬಿಯಾಗದೆ ಸ್ವಾವಲಂಬನೆಯಾಗಬೇಕು ಎಂದರು.
ಶಿಕ್ಷಣವು ಸ್ವಾವಲಂಬನೆ ಬೆಳೆಸುತ್ತದೆ. ಶಿಕ್ಷಣ ಕ್ಷೇತ್ರ ಬೆಳದಂತೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿ ಯುವಕರು ಸ್ಥಳೀಯವಾಗಿ ಉಳಿದುಕೊಳ್ಳುತ್ತಾರೆ. ಶಿಕ್ಷಣ ಮಗುವಿನಲ್ಲಿರುವ ಕೌಶಲ್ಯವನ್ನು ಹೊರ ತೆಗೆಯಬೇಕು ಹೊರತು ಮಕ್ಕಳ ಮೇಲೆ ಹೇರಿಕೆಯಾಗಬಾರದು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಮಾತನಾಡಿ, ದೇಶದ ಭದ್ರತೆ, ಅಭಿವೃದ್ಧಿಗೆ ಶಿಕ್ಷಣವು ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ. ಆದ್ದರಿಂದ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು.
ಶಾಸಕಿ ರೂಪಾಲಿ ನಾಯ್ಕ, ಜಿಲ್ಲೆಯಲ್ಲಿ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಶಿಕ್ಷಣ ಕ್ಷೇತ್ರ ಸುಧಾರಣೆಗೆ ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಗುರುಭವನ ನಿರ್ಮಾಣಕ್ಕೆ ಕ್ರಮ ವಹಿಸಿದ್ದು, ಶಿಕ್ಷಕರು ತಮ್ಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಇದು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತು ಶಿಕ್ಷಕ ನಾಗರಾಜ್ ಗೌಡ ಹಾಗೂ ಶುಭಾ ನಾಯ್ಕ ವಿಶೇಷ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪಿ.ಪಿ.ನಾಯ್ಕ, ಉಪವಿಭಾಗಧಿಕಾರಿ ಜಯಲಕ್ಷ್ಮಿ ರಾಯಕೋಡ್, ಡಿಡಿಪಿಯು ಹಣಮಂತಪ್ಪ ನಿಟ್ಟೂರು, ಎಇಇ ರಾಮಚಂದ್ರ ಗಂವ್ಕಾರ್ ಹಾಗೂ ಒನ್ನಿತರ ಅಧಿಕಾರಿಗಳು, ಶಿಕ್ಷಕರು ಇದ್ದರು.