ಕಾರವಾರ: ಬಿಜೆಪಿಯವರಿಗೆ ಮತ ನೀಡಿದರೆ ಬ್ರಾಹ್ಮಣರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ. ಗಾಂಧೀಜಿಯನ್ನು ಕೊಂದ ಗೋಡ್ಸೆ ಸಹ ಬ್ರಾಹ್ಮಣ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಯನ್ನು ಗೋಕರ್ಣ ದೇಗುಲದ ಅರ್ಚಕರು ಪ್ರಶ್ನೆ ಮಾಡಿದ್ದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ, ಸ್ವತಃ ಕುಮಾರಸ್ವಾಮಿಯವರೇ ಅರ್ಚಕರಿಗೆ ಕರೆ ಮಾಡಿ ಮಾತುಕತೆ ನಡೆಸಿ ಧೈರ್ಯದಿಂದ ಇರುವಂತೆ ಹೇಳಿದ್ದಾರೆ.
ಗೋಕರ್ಣ ಕ್ಷೇತ್ರಕ್ಕೆ ಎಚ್.ಡಿ. ಕುಮಾರಸ್ವಾಮಿ ಆಗಮಿಸಿದ್ದರು. ಗೋಕರ್ಣ ಮಹಾಬಲೇಶ್ವರನ ದರ್ಶನಕ್ಕೆ ಎಚ್‌ಡಿಕೆ ಬಂದಿದ್ದ ವೇಳೆ, ಅವರನ್ನು ತಡೆದ ಅರ್ಚಕರು, ಬ್ರಾಹ್ಮಣ ವಿರೋಧಿ ಹೇಳಿಕೆಯಿಂದ ತಮ್ಮ ಮನಸ್ಸಿಗೆ ನೋವಾಗಿದೆ. ನಿಮ್ಮ ಕುಟುಂಬದ ಮೇಲೆ ನಮಗೆ ಬಹಳವೇ ಅಭಿಮಾನವಿದೆ. ನಿಮ್ಮ ಹೇಳಿಕೆ ಬಗ್ಗೆ ಗೋಕರ್ಣದಲ್ಲಿಯೇ ಸ್ಪಷ್ಟಿಕರಣ ನೀಡಿ ಎಂದು ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಎಚ್‌ಡಿಕೆ, ನಾನು ಬ್ರಾಹ್ಮಣ ವಿರೋಧಿ ಅಲ್ಲ. ನಾನು ಬ್ರಾಹ್ಮಣರ ಜತೆಯಲ್ಲಿಯೇ ಬೆಳೆದಿದ್ದೇನೆ. ಬ್ರಾಹ್ಮಣರಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು. ನಾನು ಹೇಳಿದ್ದು ಪೇಶ್ವ ಡಿಎನ್ಎ ಹೊಂದಿರುವವರ ಬಗ್ಗೆಯಷ್ಟೇ. ಬ್ರಾಹ್ಮಣ ಸಮುದಾಯದವರ ಮೇಲೆ ಅಪಾರ ಗೌರವವಿದೆ. ರಾಮಕೃಷ್ಣ ಹೆಗಡೆ ಅವರನ್ನು ಸಿಎಂ ಮಾಡಿದ್ದೇ ದೇವೇಗೌಡ ಎಂದು ಹೇಳಿದ್ದರು. ಈ ಎಲ್ಲ ವಿಷಯಗಳೂ ಮಾಧ್ಯಮಗಳಲ್ಲಿ ಪ್ರಸಾರವಾದವು.
ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿರುವ ವಿಷಯ ಎಚ್‌ಡಿಕೆಗೆ ಗೊತ್ತಾಗಿದೆ. ಆಗ ಅವರು ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆದರೂ ಅರ್ಚಕ ನರಸಿಂಹ ಉಪಾಧ್ಯಾಯರಿಗೆ ಕರೆ ಮಾಡಿದ ಕುಮಾರಸ್ವಾಮಿ, ನಿಮ್ಮ ಮಾತಿನಿಂದ ತಮಗೆ ಯಾವುದೇ ರೀತಿಯ ಬೇಸರವಾಗಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಕುಟುಂಬ ಸೌಖ್ಯದ ಬಗ್ಗೆಯೂ ವಿಚಾರಿಸಿದ್ದಾರೆ.
ಈ ವೇಳೆ ಅರ್ಚಕ ನರಸಿಂಹ ಉಪಾಧ್ಯಾಯ ಅವರು ಎಚ್‌ಡಿಕೆ ಜತೆ ದೂರವಾಣಿ ಮೂಲಕ ಮಾತನಾಡುವಾಗ, ನಾನು ದೇವೇಗೌಡರ ಹಾಗೂ ಜನತಾದಳದ ಅಭಿಮಾನಿಗಳಾಗಿದ್ದೇನೆ. ಆ ಕಾರಣಕ್ಕಾಗಿ ನಿಮ್ಮ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ನೀವು ಬೇಸರ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಅವರು, ತಮಗೆ ಯಾವುದೇ ರೀತಿಯ ಬೇಸರ ಇಲ್ಲ. ನೀವು ಬೆಂಗಳೂರಿಗೆ ಬಂದಾಗ ಒಮ್ಮೆ ಭೇಟಿಯಾಗಿ ಎಂದು ಹೇಳಿದ್ದಾರೆ. ಅದಕ್ಕೆ ಉಪಾಧ್ಯಾಯರು, “ಭೇಟಿಯಾಗುತ್ತೇನೆ” ಎಂದು ತಿಳಿಸಿದ್ದಾರೆ.