ಅಂಕೋಲಾ: ಸಂಗಾತಿ ರಂಗಭೂಮಿ ಆಶ್ರಯದಲ್ಲಿ ಫೆ.9ರಿಂದ 15ರವರೆಗೆ ಆಯೋಜಿಸಿರುವ 5ನೇ ವರ್ಷದ ಅಂಕೋಲಾ ಉತ್ಸವ- 2023ರ ಆಮಂತ್ರಣ ಪತ್ರಿಕೆಯನ್ನು ತಹಶೀಲ್ದಾರ್ ಸತೀಶ್ ಗೌಡರವರು ಪಟ್ಟಣದ ಪರಿವೀಕ್ಷಣ ಮಂದಿರದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಸ್ವಾತಂತ್ರ‍್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಅಂಕೋಲಾದಲ್ಲಿ ಜರುಗುತ್ತಿರುವ 5ನೇ ವರ್ಷದ ಅಂಕೋಲಾ ಉತ್ಸವಕ್ಕೆ ಎಲ್ಲರನ್ನು ಪ್ರೀತಿ ಗೌರವದಿಂದ ಆಹ್ವಾನಿಸುತ್ತಿದ್ದೇವೆ. ಈ ಉತ್ಸವ ಅಂಕೋಲೆ ಜನರ ಸ್ವಾಭಿಮಾನ ಮತ್ತು ಹೆಮ್ಮೆಯ ಸಂಕೇತವಾಗಿದೆ. 7 ದಿನಗಳ ಕಾಲ ನಡೆಯಲಿರುವ ಅಂಕೋಲಾ ಉತ್ಸವ ಈ ಭಾಗದ ಪ್ರತಿ ಮನೆ-ಮನೆಯವರ ಹಬ್ಬವಾಗಿ ರೂಪುಗೊಂಡಿದೆ. ಸಾರ್ವಜನಿಕರಿಗೆ 7 ದಿನಗಳ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಫೆ.11 ರಂದು ಆಸ್ಕರ್ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಮತ್ತು ಅನುರಾಧ ಭಟ್ ತಂಡದವರಿoದ ವಿಜಯಗಾನೋತ್ಸವ ಪ್ರದರ್ಶನ ನೀಡಲಿದ್ದಾರೆ. ಈ ಅಮೋಘವಾದ ಕಾರ್ಯಕ್ರಮದಲ್ಲಿ ಅಂಕೋಲಾ ತಾಲೂಕು ಮಾತ್ರವಲ್ಲದೇ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದೆ. ಒಟ್ಟು 7 ದಿನ ಅಂಕೋಲಾ ನಗರ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹಾಸಂಗಮವಾಗಲಿದೆ ಎಂದು ತಿಳಿಸಿದರು.
ಸಿಪಿಐ ರಾಬರ್ಟ್ ಡಿಸೋಜಾ ಮಾತನಾಡಿ, ಪ್ರತಿದಿನ ಸಂಜೆ 6ರಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕಲಾವಿದರ ಕಾರ್ಯಕ್ರಮ ಸಿನೇಮಾ ಹಾಗೂ ಕಿರುತೆರೆ ಕಲಾವಿದರು, ಜಾನಪದ ಆಧುನಿಕ ನೃತ್ಯ, ನಾಟಕ, ಸಂಗೀತ ಸಂಜೆ, ಸರಿಗಮಪ ಕಲಾವಿದರು, ಕನ್ನಡ ಕೋಗಿಲೆ, ಮಜಾ ಭಾರತ, ಕಾಮಿಡಿ ಕಿಲಾಡಿಗಳು, ರಾಜ್ಯ ಮಟ್ಟದ ಕಲಾವಿದರಿಂದ ನೃತ್ಯ, ಯಕ್ಷಗಾನ, ಗಟ್ಟಿಮೇಳ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸಿನಿ ಕಲಾವಿದರು ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಸಂಘಟನೆಯ ಪ್ರಮುಖ ರಾಜೇಂದ್ರ ನಾಯ್ಕ ಮಾತನಾಡಿ, ಡ್ಯಾನ್ಸ್ ಆಫ್ ಇಂಡಿಯಾ- ಹಲವು ರಾಜ್ಯಗಳ ನೃತ್ಯ ಪ್ರದರ್ಶನ ಹೀಗೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ಅಮ್ಯೂಜ್‌ಮೆಂಟ್ ಪಾರ್ಕ್, ಆಹಾರ ಮತ್ತು ವಸ್ತು ಪ್ರರ್ದಶನ ಮಳಿಗೆ ಸಾರ್ವಜನಿಕರನ್ನು ರಂಜಿಸಲಿದೆ ಎಂದರು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಂಘಟಕ ಕೆ.ರಮೇಶ, ರಾಘು ಕಾಕರಮಠ, ಅರುಣ ಶೆಟ್ಟಿ, ನಿಲೇಶ ನಾಯ್ಕ ಸುಬ್ರಹ್ಮಣ್ಯ ಗಾಂವಕರ, ಮೋಹನ ದುರ್ಗೇಕರ, ಸಂತೋಷ ಗೌಡ, ಮೋಹನ್ ಗೌಡ, ಮಹೇಶ್ ಗೌಡ, ಸಣ್ಣಪ್ಪ ಗೌಡ, ವಿನಾಯಕ ಶೆಟ್ಟಿ, ಪ್ರದೀಪ ಗಾಂವಕರ, ಹೂವಾ ಖಂಡೇಕರ ಮುಂತಾದವರು ಪಾಲ್ಗೊಂಡಿದ್ದರು.