ದಾಂಡೇಲಿ: ನಗರದ ಟೌನ್‌ಶಿಪ್‌ನಲ್ಲಿರುವ ಶ್ರೀಶಂಕರ ಮಠದ ಮೂರ್ತಿ ಪ್ರತಿಷ್ಠಾಪನೆಯ 12ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀಗಾಯತ್ರಿ ಸಮೂಹದ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮ, ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ಫೆ.6ರಿಂದ ಆರಂಭಗೊoಡ ವಿವಿಧ ಪೂಜಾ ಕಾರ್ಯಕ್ರಮಗಳು ಮಂಗಳವಾರವೂ ಮುಂದುವರಿದಿದೆ.
ಬೆಳಿಗ್ಗೆ 7 ಗಂಟೆಯಿಂದ 9.30 ಗಂಟೆಯವರೆಗೆ ಲಘುರುದ್ರ, ಬೆಳಿಗ್ಗೆ 9.30 ಗಂಟೆಯಿಂದ 11.30 ಗಂಟೆಯವರೆಗೆ ಗಣಹೋಮ, ಗಾಯತ್ರಿಹೋಮ, ರುದ್ರ ಸ್ವಾಹಾಕಾರ ಹೋಮಗಳು ನೆರವೇರಿತು. ಇದರ ಜೊತೆ ಜೊತೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಸಾಮೂಹಿಕ ಕುಂಕುಮಾರ್ಚನೆ ನಡೆದು, ಮಧ್ಯಾಹ್ನ 12 ಗಂಟೆಯಿಂದ ಪೂರ್ಣಾಹುತಿ, ನೈವೇದ್ಯ, ಮಹಾಮಂಗಳಾರತಿ ಕಾರ್ಯಕ್ರಮವು ಜರುಗಿತು. ಆನಂತರ ಹುಬ್ಬಳ್ಳಿಯ ಶ್ರೀಪ್ರಣವಾನಂದತೀರ್ಥ ಮಹಾಸ್ವಾಮೀಜಿಯವರಿಂದ ಆಶೀರ್ವಚನ ಕಾರ್ಯಕ್ರಮ ಜರುಗಿತು.
ಪ್ರಣವಾನಂದತೀರ್ಥ ಮಹಾಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಹುಟ್ಟು, ಬದುಕು ಮತ್ತು ಸಾವಿನ ನಡುವೆ ನಮ್ಮ ಇರುವಿಕೆ ಅತೀ ಮುಖ್ಯ. ನಮ್ಮ ಜೀವಿತಾವಧಿಯಲ್ಲಿ ನಾವು ಬದುಕುವುದು, ನಮಗಾಗಿ ಆಸ್ತಿ ಕೂಡಿಡುವುದು, ನಮಗಾಗಿ ಬದುಕು ರೂಪಿಸುವುದು ಬದುಕಲ್ಲ. ಅದರ ಬದಲಾಗಿ ಸಮಾಜಕ್ಕೆ ಬೆಳಕಾಗಿ, ಸಂಕಷ್ಟದಲ್ಲಿದ್ದವರ ಕಣ್ಣೀರನ್ನು ಒರೆಸುವ ಕರುಣಾಮಯಿ ಮತ್ತು ಸೇವಾಕೈಂಕರ‍್ಯದ ಜೀವನ ವ್ಯಕ್ತಿತ್ವವನ್ನು ನಾವು ಮೈಗೂಡಿಸಿ ಬಾಳಿದಾಗ ಮಾತ್ರ ಜೀವನ ಸಾರ್ಥಕವೆನಿಸುತ್ತದೆ. ಧರ್ಮ, ಸಂಸ್ಕೃತಿ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಉಜ್ವಲ ಬದುಕನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಎಲ್ಲಿ ಧರ್ಮವಿರುತ್ತದೆಯೊ ಅಲ್ಲಿ ರಕ್ಷಣೆ ಇರುತ್ತದೆ. ಧರ್ಮ ಸಂಸ್ಥಾಪನೆ ಮತ್ತು ಆರಾಧನೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಗಾಯತ್ರಿ ಚಾರಿಟೇಬಲ್ ಟ್ರಸ್ಟ್ ಮತ್ತು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಮತ್ತು ಶ್ರೀಶಂಕರ ಮಠದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಶ್ರಮಿಸಿದ್ದರು.
ಶಂಕರಮಠದಲ್ಲಿ ಪ್ರತಿಷ್ಠಾಪನಾ ಮಹೋತ್ಸವ
