ಬೆಂಗಳೂರು: ಪ್ರಬಲ ಭೂಕಂಪಕ್ಕೆ ತತ್ತರಿಸಿ ಹೋಗಿರುವ ಟರ್ಕಿಯ ನೆರವಿಗೆ ಭಾರತ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ ಇಂಧನ ಸಪ್ತಾಹ–2023ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ದುರಂತದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದರು ಮತ್ತು ಭೂಕಂಪ ಸಂತ್ರಸ್ತರಿಗೆ ಭಾರತವು ಸಾಧ್ಯವಾಗುವ ಎಲ್ಲ ರೀತಿಯಲ್ಲಿಯೂ ನೆರವು ನೀಡಲಿದೆ ಎಂದು ಭರವಸೆ ನೀಡಿದರು.
ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಹಲವಾರು ಜನರ ಸಾವು ಹಾಗೂ ಹಾನಿಗಳು ವರದಿಯಾಗಿವೆ. ಟರ್ಕಿಯ ಸಮೀಪವಿರುವ ದೇಶಗಳಲ್ಲಿಯೂ ಕೂಡ ಹಾನಿ ಸಂಭವಿಸಿದೆ. ಭೂಕಂಪ ಪೀಡಿತ ಸಂತ್ರಸ್ತರ ಜೊತೆಗೆ ಭಾರತದ 140 ಕೋಟಿ ಜನರ ಸಹಾನುಭೂತಿಯಿದೆ. ಭಾರತೀಯರು ಭೂಕಂಪ ಪೀಡಿತ ಜನರೊಂದಿಗೆ ಇದ್ದಾರೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಮೋದಿ ಹೇಳಿದ್ದಾರೆ.