ಹೊನ್ನಾವರ: ನ್ಯಾಕ್ ಪೀರ್ ಕಮಿಟಿಯ ಮಹತ್ವ ಮತ್ತು ಅದರ ಮೌಲ್ಯಮಾಪನ ಹೇಗೆ ನಡೆಯುತ್ತದೆ ಎನ್ನುವುದನ್ನು ವಿದ್ಯಾಸಂಸ್ಥೆಯ ಮೇಲೆ ಅಭಿಮಾನ ಇಟ್ಟಿರುವ ಎಲ್ಲರಿಗೂ ತಿಳಿಸಿ ಆತ್ಮವಿಶ್ವಾಸದಿಂದ ಈ ಪರೀಕ್ಷೆಗೆ ಸಿದ್ಧರಾಗಿದ್ದೇವೆ ಎಂದು ಎಂಪಿಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ಹೇಳಿದರು.
ಅವರು ಎಸ್‌ಡಿಎಂ ಮಹಾವಿದ್ಯಾಲಯದಲ್ಲಿ ನ್ಯಾಕ್ ಪೀರ್ ಕಮಿಟಿಯ ಭೇಟಿಯ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭೇಟಿಯ ಸಂದರ್ಭದಲ್ಲಿ ನ್ಯಾಕ್ ಪೀರ್ ತಂಡದವರು ವಿದ್ಯಾರ್ಥಿಗಳು, ಪಾಲಕರು ಹಾಗೂ ಪೂರ್ವ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಲಿದ್ದಾರೆ. ಆದಕಾರಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪಾಲಕರು ಹಾಗೂ ಪೂರ್ವ ವಿದ್ಯಾರ್ಥಿಗಳ ಸಹಕಾರವು ನಾವು ಉತ್ತಮ ಶ್ರೇಣಿಯನ್ನು ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತ್ತದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ನಾಯ್ಕ ಮಾತನಾಡಿ, 1964ರಲ್ಲಿ ಪ್ರಾರಂಭವಾದ ಎಸ್‌ಡಿಎಂ ಮಹಾವಿದ್ಯಾಲಯ ಇಂದಿಗೆ ಮೂರು ಬಾರಿ (2004, 2011 ಮತ್ತು 2017) ನ್ಯಾಕ್‌ನಿಂದ ‘ಎ’ ಶ್ರೇಣಿಯ ಮಾನ್ಯತೆ ಪಡೆದಿರುವ ಜಿಲ್ಲೆಯ ಏಕೈಕ ಮಹಾವಿದ್ಯಾಲಯ ಎನ್ನುವ ಹೆಮ್ಮೆಗೆ ಪಾತ್ರವಾಗಿದೆ. ಇದೇ ಬರುವ ಗುರುವಾರ (ಫೆ.9) ಮತ್ತು ಶುಕ್ರವಾರ (ಫೆ.10) ನಾಲ್ಕನೇ ಅವಧಿಯ ಮೌಲ್ಯಾಂಕನಕ್ಕಾಗಿ ಸಿದ್ಧವಾಗಿದೆ. ಆ ಮೂಲಕ 2017ರಿಂದ 2022ರವರೆಗೆ ಐದು ವರ್ಷಗಳಲ್ಲಿ ನಮ್ಮ ಮಹಾವಿದ್ಯಾಲಯದ ಸರ್ವತೋಮುಖ ಬೆಳವಣಿಗೆಯನ್ನು ನಾವು ಪರೀಕ್ಷೆಗೆ ಒಡ್ಡುತ್ತಿದ್ದೇವೆ ಎಂದು ತಿಳಿಸಿದರು.
ಈ 5 ವರ್ಷಗಳಲ್ಲಿ ಮಹಾವಿದ್ಯಾಲಯದ ಎಲ್ಲಾ ಸಾಧನೆಗೆ ಎಂಪಿಇ ಸೊಸೈಟಿ, ನಮ್ಮ ಆಡಳಿತ ಮಂಡಳಿಯ ದೂರದೃಷ್ಟಿ ಮತ್ತು ಪೂರ್ವಭಾವಿ ಚಿಂತನೆಯೇ ಕಾರಣ. ನ್ಯಾಕ್‌ನ 2021ರ ಹೊಸ ಮಾರ್ಗಸೂಚಿಯಂತೆ ಎಲ್ಲ ಅವಶ್ಯಕ ಮಾಹಿತಿಗಳನ್ನು ನ್ಯಾಕ್‌ಗೆ ಸಲ್ಲಿಸಲಾಗಿದೆ. ಅದರಂತೆ ದಾಖಲೆಗಳನ್ನು ಹೊಂದಿಸಿಕೊಂಡು ಮೌಲ್ಯಮಾಪನಕ್ಕೆ ಅಣಿಯಾಗುತ್ತಿದ್ದೇವೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಮಹಾವಿದ್ಯಾಲಯದ ಪ್ರತಿಯೊಬ್ಬ ಶಿಕ್ಷಕ- ಶಿಕ್ಷಕೇತರ ವಿತ್ರರು ಸತತ ಪರಿಶ್ರಮ ವಹಿಸಿ ಸಹಕಾರ ನೀಡಿದ್ದಾರೆ. ಅಲ್ಲದೇ ನಮ್ಮ ಮಹಾವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿದ ಕಂಪ್ಯೂಟರ್ ಲ್ಯಾಬ್, ವಿಸ್ತಾರವಾದ ಬಯಲು ರಂಗಮAದಿರ, ನಮ್ಮಲ್ಲಿ ಮಾತ್ರ ಲಭ್ಯವಿರುವ ಯುಜಿಅರ್‌ಸಿ, ಒಳಾಂಗಣ ಕ್ರೀಡಾಂಗಣ, ಇಂಗ್ಲಿಷ್ ಲ್ಯಾಂಗ್ವೇಜ್ ಲ್ಯಾಬ್, ವಿಶೇಷವಾಗಿ ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಾಡಿದ ಸಾಧನೆಮತ್ತು ಶಿಕ್ಷಕರು ಮಾಡಿದ ಸಾಧನೆಗಳು ನ್ಯಾಕ್ ಮೌಲ್ಯಾಂಕನಕ್ಕೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್.ಎಂ.ಭಟ್ಟ, ಉಪಾಧ್ಯಕ್ಷ ನಾಗರಾಜ ಕಾಮತ್, ಖಜಾಂಜಿ ಉಮೇಶ ನಾಯ್ಕ, ಕಾರ್ಯಕಾರಿ ಮಂಡಳಿಯ ಸದಸ್ಯ ಸುರೇಶ್ ಶೇಟ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ್ ಕಾಮತ್, ಕಾಲೇಜಿನ ನ್ಯಾಕ್ ಸಂಯೋಜಕ ಡಾ.ಪಿ.ಎಂ.ಹೊನ್ನಾವರ, ಸಿಇಒ ಕಿರಣ ಕುಡ್ತಾಲಕರ್ ಸೇರಿದಂತೆ ಇನ್ನಿತರರು ಇದ್ದರು.