ಕಾರವಾರ: ಕದ್ರಾ ಕೆಪಿಸಿಎಲ್‌ಗೆ ಸಂಬಂಧಿಸಿದ ಕೊಡಸಳ್ಳಿ ಯೋಜನೆಯ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 65 ಕಾರ್ಮಿಕರು ಇಎಸ್‌ಐ, ಭವಿಷ್ಯನಿಧಿ ಮತ್ತು ಹೆಚ್ಚುವರಿ ಸಂಬಳಕ್ಕಾಗಿ ಕಳೆದ ಕೆಲವು ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮಾಜಿ ಶಾಸಕ ಸತೀಶ್ ಸೈಲ್, ಇಎಸ್‌ಐ, ಭವಿಷ್ಯ ನಿಧಿ, ಕಾರ್ಮಿಕ ಮತ್ತು ಕೆಪಿಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಡನೆ ನಡೆಸಿದ ಸಂಧಾನ ಸೂತ್ರದನ್ವಯ ತಮ್ಮ ಮುಷ್ಕರವನ್ನು ಹಿಂಪಡೆದರು.
ಕೆಪಿಸಿ ಕೊಡಸಳ್ಳಿ ಪ್ರೊಜೆಕ್ಟ್ನಲ್ಲಿ ಕೆಲಸ ಮಾಡುತಿದ್ದ ಗುತ್ತಿಗೆ ಕಾರ್ಮಿಕರಿಗೆ 2022 ಜನವರಿ ತಿಂಗಳಿನಿಂದ ಸರಕಾರದ ಸುತ್ತೋಲೆಯಂತೆ ಸಂಬಳ ಹೆಚ್ಚುವರಿ ಆಗಿದ್ದು,ಆದರೆ ಇದರ ಗುತ್ತಿಗೆದಾರರಗಿದ್ದ ಬನಶಂಕರಿ ಎಂಬ ಸಂಸ್ಥೆಯವರು ಹೆಚ್ಚುವರಿ ಸಂಬಳವನ್ನು ನೀಡುತ್ತಿರಲಿಲ್ಲ.ಇಸ್ಟು ಮಾತ್ರವಲ್ಲದೆ ಇದೇ ಗುತ್ತಿಗೆದಾರರು ಇಎಸ್ಐ ಮತ್ತು ಭವಿಷ್ಯನಿಧಿ ವಂತಿಗೆ ಯನ್ನೂ ತುಂಬುತಿರಲಿಲ್ಲ. ಈ ಹಿಂದೆ ಹಲವಾರು ಬಾರಿ ಮಾಜಿ ಶಾಸಕ ಸತೀಶ್ ಸೈಲ್ ಗುತ್ತಿಗೆ ಕಾರ್ಮಿಕರೊಡಗೂಡಿ ಈ ಕುರಿತು ಹಲವಾರು ಹೋರಾಟ ನಡೆಸಿದ್ದರು. ಈ ಮಧ್ಯೆ ಇದೀಗ ಗುತ್ತಿಗೆ ಕಾರ್ಮಿಕರು ಎರಡು ದಿನದ ಹಿಂದೆ ಅನಿರ್ದಿಷ್ಟ ಮುಷ್ಕರ ಹೂಡಿ ಧರಣಿ ನಡೆಸುತ್ತಿದ್ದರು.
ಇತ್ತೀಚಿಗೆ ಮಾಜಿ ಶಾಸಕ ಸತೀಶ್ ಸೈಲ್ ಜಿಲ್ಲಾಧಿಕಾರಿಗಳನ್ನು ಬೇಟಿಯಾಗಿ ಕೆಪಿಸಿ ಗುತ್ತಿಗೆ ಕಾರ್ಮಿಕರ ಸಮಸ್ಯೆಯನ್ನು ವಿವರಿಸಿ ನ್ಯಾಯ ದೊರಕಿಸಿಕೊಡಲು ವಿನಂತಿಸಿದ್ದರು. ಜಿಲ್ಲಾಧಿಕಾರಿಗಳು ಜಿಲ್ಲಾ ಕಾರ್ಮಿಕ ಅಧಿಕಾರಿಗಳನ್ನು ಕರೆಸಿ ಕೂಡಲೇ ಈ ಕುರಿತು ಗುತ್ತಿಗೆ ಕೆಲಸಗಾರರಿಗೆ ನ್ಯಾಯ ದೊರಕಿಸಲು ಆದೇಶಿಸಿದ್ದರು.ಆ ಪ್ರಯುಕ್ತ ಇಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಇಎಸ್ಐ ಮತ್ತು ಭವಿಷ್ಯ ನಿಧಿ ಅಧಿಕಾರಿಗಳು ಕದ್ರಾ ಕೆಪಿಸಿ ಕಚೇರಿಗೆ ತೆರಳಿ ಕೆಪಿಸಿ ಅಧಿಕಾರಿಗಳು ಮತ್ತು ಗುತ್ತಿಗೆದಾರ ಸಂಸ್ತೆ ಮುಖ್ಯಸ್ತನೊಡನೆ ಮಾಜಿ ಶಾಸಕ ಸತೀಶ್ ಸೈಲ್ ಮತ್ತು ಕಾರ್ಮಿಕರ ಸಮಕ್ಷಮ ಮಾತುಕತೆ ನಡೆಸಿ ಈ ತಿಂಗಳ ಹದಿಮೂರು ತಾರೀಖಿನ ಒಳಗಡೆ ಬಾಕಿ ಇರುವ ಸಂಬಳ ಮತ್ತು ಇತರ ಎಲ್ಲಾ ಸವಲತ್ತನ್ನು ನೀಡುವುದಾಗಿ ಮನವೊಲಿಸಿ ಒಪ್ಪಂದಕ್ಕೆ ಬಂದಿರುವರು. ಈ ಸಂದರ್ಭದಲ್ಲಿ ಆಡಳಿತ ವರ್ಗವನ್ನು ಎಚ್ಚರಿಸಿದ ಮಾಜಿ ಶಾಸಕ ಸತೀಶ ಸೈಲ್ ಇಎಸ್‌ಐ ತುಂಬದಿದ್ದರೆ ಗುತ್ತಿಗೆ ಕಾರ್ಮಿಕರು ತಮ್ಮ ಹಾಗೂ ಕುಟುಂಬ ವರ್ಗದ ಆಸ್ಪತ್ರೆ ಖರ್ಚು ಬಗ್ಗೆ ಪಡುತ್ತಿರುವ ಕಷ್ಟವನ್ನು ಅಧಿಕಾರಿಗಳಿಗೆ ಮನಮುಟ್ಟುವಂತೆ ವಿವರಿಸಿದರು.
ಕೆಪಿಸಿ ಅಧಿಕಾರಿಗಳು ಮತ್ತು ಗುತ್ತಿಗೆದಾರ ತಾಂತ್ರಿಕ ಕಾರಣದಿಂದ ಹೆಚ್ಚುವರಿ ಸಂಬಳ ನೀಡಲು ತಡವಾಗಿರುತ್ತದೆ. ಆದರೂ ನಾವು ವಿಶೇಷ ಆಸಕ್ತಿ ವಹಿಸಿ ರಾಜ್ಯದಲ್ಲಿಯೇ ಪ್ರಥಮವಾಗಿ ಈ ಸವಲತ್ತನ್ನು ಈ ತಿಂಗಳ ಹದಿಮೂರನೇ ತಾರೀಕಿನೊಳಗೆ ನೀಡುವುದಾಗಿ ಎಂದು ಹೇಳಿದರು. ಕೆಪಿಸಿ ಯಲ್ಲಿ ಇನ್ನೂ ವೇತನಕ್ಕೆ ಸಂಬಂಧಿಸಿದಂತೆ 2017ರಿಂದಲೂ ಬಾಕಿ ಇರುವ ಹಲವಾರು ಕಾರ್ಮಿಕ ವಿವಾದಗಳನ್ನು ತಾನು ವಿಶೇಷ ಆಸಕ್ತಿ ವಹಿಸಿ ಬಗೆಹರಿಸಲು ಪ್ರಯತ್ನಿಸುವುದಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಭರವಸೆ ನೀಡಿದರು. ಧರಣಿ ನಡೆಸುತ್ತಿದ್ದ ಕಾರ್ಮಿಕರು ಈ ಕುರಿತು ಈ ತಿಂಗಳ ಹದಿಮೂರನೆ ತಾರೀಖಿನ ಒಳಗೆ ಹೆಚ್ಚುವರಿ ಸಂಬಳ ಮತ್ತು ಇತರ ಸವಲತ್ತು ಬಟವಾಡೆ ಮಾಡಲಾಗುತ್ತೆ ಎಂಬ ಕುರಿತು ಬರವಣಿಗೆಯಲ್ಲಿ ಬೇಕೆಂದು ಬೇಡಿಕೆ ಇಟ್ಟಾಗ, ಆ ಬೇಡಿಕೆಯನ್ನೂ ಗುತ್ತಿಗೆದಾರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಪೂರೈಸಿದರು. ತದನಂತರ ಮುಷ್ಕರ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸತೀಶ್ ಸೈಲ್, ಕೆಪಿಸಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ್ಮ ಮಾತಿಗೆ ತಪ್ಪಿದಲ್ಲಿ ತಾನು ಸ್ವತಃ ಕಾರ್ಮಿಕರೊಂದಿಗೆ ಕೆಪಿಸಿ ಕಚೇರಿ ಮುಂದೆಯೇ ಧರಣಿ ನಡೆಸುವುದಾಗಿ ಸಂಬಂಧಿಸಿದವರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಶಂಭು ಶೆಟ್ಟಿ, ಜಿಪಿ ನಾಯಕ್, ದಿನೇಶ್, ರಾಜೇಶ್ ನಾಯ್ಕ, ಗುರುದಾಸ್ ಶೇಟ್, ಕದ್ರಾ ಮತ್ತು ಮಲ್ಲಾಪುರ ಪಂಚಾಯತ್ ಸದಸ್ಯರಾದ ಉದಯ ಬಾಂದೇಕರ್, ಶ್ಯಾಮನಾಥನಾಯ್ಕ್, ತನುಜಾ ರಂಗಸ್ವಾಮಿ, ಹನುಮವ್ವ, ರೀನಾ ಕಿಸ್ಟೋಡ್, ಅಶ್ವಿನಿ, ಅಯ್ಯಪ್ಪ, ಡಿಂಕಿ, ರಾಜೇಶ್ ಗಾಂವ್ಕರ್ ಮತ್ತು ಹಲವಾರು ಕಾರ್ಮಿಕ ನಾಯಕರು ಇದ್ದರು.
ಸೈಲ್ ಮಧ್ಯಸ್ಥಿಕೆಯಲ್ಲಿ ಕೆಪಿಸಿ ಗುತ್ತಿಗೆ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಅಂತ್ಯ
