ಕಾರವಾರ: ಬೈತಖೋಲ್‌ನ ಸರ್ವೆ ನಂ.33 ಮತ್ತು 16ರ 19 ಹೆಕ್ಟೇರ್ ಮತ್ತು 240 ಹೆಕ್ಟೇರ್ ಜಮೀನು ಸೀಬರ್ಡ್ ನೌಕಾನೆಲೆಗೆ ಅರಣ್ಯ ಇಲಾಖೆಯಿಂದ ಅಧಿಕೃತವಾಗಿ ಈವರೆಗೆ ಹಸ್ತಾಂತರ ಆಗಿಲ್ಲ. ಆದರೂ ನೌಕಾನೆಲೆಯಿಂದ ಬೈತಖೋಲ್ ಗುಡ್ಡವನ್ನು ಕೊರೆದು ರಸ್ತೆ ನಿರ್ಮಿಸುವ ಮೂಲಕ ಅಲ್ಲಿನ ಸ್ಥಳೀಯ ನಿವಾಸಿಗಳನ್ನು ಆತಂಕದಲ್ಲೆ ದಿನ ಕಳೆಯುವಂತೆ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಸತೀಶ್ ಸೈಲ್ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದಾರು ತಿಂಗಳಿನಿಂದ ನೌಕಾನೆಲೆಯವರು ಬೈತಖೋಲ್ ಗುಡ್ಡವನ್ನು ಅಗೆದು ರಸ್ತೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಈ ಜಮೀನಿನ ಪಹಣಿಯಲ್ಲಿ ಈವರೆಗೂ ಅರಣ್ಯ ಇಲಾಖೆಯ ಹೆಸರೇ ಇದೆ. ಆದರೂ ನೌಕಾನೆಲೆಯವರು ಗುಡ್ಡ ಕೊರೆದು 20 ಮೀ. ಅಗಲದ ರಸ್ತೆ ನಿರ್ಮಾಣ ಮಾಡುತ್ತಿದ್ದು, ರಸ್ತೆಯ ಕೆಳಭಾಗದಲ್ಲಿ ಮನೆಗಳಿವೆ. ಕಾರವಾರ ಸೂಕ್ಷ್ಮ ಪ್ರದೇಶವಾಗಿದ್ದು, ರಸ್ತೆಗಾಗಿ ಗುಡ್ಡವನ್ನು ಕೊರೆದಿರುವುದರಿಂದ ಮಳೆಗಾಲದಲ್ಲಿ ಈ ಗುಡ್ಡ ಕುಸಿಯುವ ಭೀತಿ ಇದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದಾಗ ಜಿಲ್ಲಾಧಿಕಾರಿಗಳೂ ನೌಕಾನೆಲೆಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಆದರೆ ನೌಕಾನೆಲೆಯವರು ತಮಗೆ ಸರ್ಕಾರ ನೀಡಿದ ಜಾಗದಲ್ಲಿ ರಸ್ತೆ ಮಾಡುತ್ತಿದ್ದೇವೆ ಎಂದಿದ್ದಾರಂತೆ. ಸರ್ಕಾರ ನೀಡಿದ ಜಮೀನುಗಳಲ್ಲಿ ನಾನ್ ಫಾರೆಸ್ಟ್, ಫಾರೆಸ್ಟ್ ಲ್ಯಾಂಡ್ ಕೂಡ ಇದೆ. ಆದರೆ ಇದು ಎಲ್ಲಿ ಬರುತ್ತೆ ಎಂದು ಕೇಳಿದರೆ ನೌಕಾನೆಲೆಯವರಿಗೂ ತಿಳಿದಿಲ್ಲ, ಅರಣ್ಯ ಇಲಾಖೆಯವರಿಗೂ ಗೊತ್ತಿಲ್ಲ ಎನ್ನುವುದು ವಿಚಿತ್ರ. ಫಾರೆಸ್ಟ್ ಲ್ಯಾಂಡ್‌ನಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಆದರೂ ನೌಕಾನೆಲೆಯಿಂದ ರಸ್ತೆ ನಿರ್ಮಾಣ ಕಾರ್ಯ ಮುಂದುವರಿದಿದೆ ಎಂದು ದೂರಿದರು.
ಸಭೆಗಳಲ್ಲಿ ನೌಕಾನೆಲೆಯವರು ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ರಸ್ತೆ ನಿರ್ಮಾಣ ಮಾಡುತ್ತೇವೆ ಹಾಗೂ ಮುಂದೆಯೂ ಹಾಗೆಯೇ ನೋಡಿಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ ಮಳೆಗಾಲದಲ್ಲಿ ನೀರು ಒಮ್ಮೆಲೆ ಬಂದರೆ ಗುಡ್ಡದ ಕೆಳಭಾಗದ ಮನೆಗಳು ನೆಲಸಮವಾಗುತ್ತವೆ. ಕಡವಾಡದ ಮಾಡಿಭಾಗದ ದುರಂತ ಇಲ್ಲಿಯೂ ಸಂಭವಿಸುವ ಅಪಾಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಗುಡ್ಡದ ಮಣ್ಣಿನ ಪರೀಕ್ಷೆ ಮತ್ತು ಆ ಭಾಗದಲ್ಲಿ ಸರ್ವೆ ನಡೆಸಲು ಡಿಯುಡಿಸಿಗೆ ಸೂಚಿಸಿದ್ದಾರೆ. ಇದರ ಜೊತೆಗೆ, ಸ್ಥಳೀಯರ ವಿರೋಧದ ನಡುವೆಯೂ ಹಠ ಹಿಡಿದು ಕಾಮಗಾರಿ ಮುಂದುವರಿದಿ ಮುಂದೆ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ನೌಕಾನೆಲೆಯವರೇ ಜವಾಬ್ದಾರರು ಎಂದು ಲಿಖಿತವಾಗಿ ನೀಡಲು ನೌಕಾನೆಲೆಯ ಅಧಿಕಾರಿಗಳಿಗೆ ತಿಳಿಸಿದ್ದು, ಅದಕ್ಕೆ ಜಿಲ್ಲಾಧಿಕಾರಿಗಳ ಎದುರು ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.