ನವದೆಹಲಿ: ಐದನೇ ಬಾರಿ ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್ ಸಂಸತ್ತು ಭವನದಲ್ಲಿ 2023-2024 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ.
ಬಜೆಟ್ ಮಂಡನೆಗೂ ಮುನ್ನ ಮಾತನಾಡಿದ ಅವರು ಅಮೃತ ಕಾಲದ ಮೊದಲ ಬಜೆಟ್ ಇದಾಗಿದ್ದು, ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ ಮತ್ತು ಉಜ್ವಲ ಭವಿಷ್ಯದತ್ತ ಸಾಗುತ್ತಿದೆ ಎಂದು ತಿಳಿಸಿದರು. ಮಹಿಳೆಯರು, ಯುವಕರು, ಒಬಿಸಿ ದಲಿತರಿಗೆ ಮನ್ನಣೆ ನೀಡುವುದು ನಮಗೆ ಬಹಳ ಮುಖ್ಯವಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, 28 ತಿಂಗಳವರೆಗೆ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಪೂರೈಸುವ ಯೋಜನೆಯೊಂದಿಗೆ ಯಾರೂ ಹಸಿವಿನಿಂದ ಮಲಗದಂತೆ ನಾವು ಖಚಿತಪಡಿಸಿದ್ದೇವೆ ಎಂದು ಹೇಳಿದರು. ಗರೀಬ್ ಕಲ್ಯಾಣ ಯೋಜನೆ ಮುಂದಿನ ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ.
2014 ರಿಂದ ಭಾರತದಾದ್ಯಂತ 157 ಹೊಸ ನರ್ಸಿಂಗ್ ಕಾಲೇಜು ಆರಂಭವಾಗಿದೆ. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು. ಹಾಗೂ ಭದ್ರ ಮೇಲ್ಡಂಡೆ ಯೋಜನೆಗೆ 5630 ಕೋಟಿ ರೂ.ಹಣವನ್ನು ಮೀಸಲು ಇಡುವುದಾಗಿ ಘೋಷಣೆ ಮಾಡಿದರು.