ಜೊಯಿಡಾ: ಸಾಮರಸ್ಯದಿಂದಲೇ ಸಂಸ್ಕೃತಿ, ಭಾಷೆ, ಸಾಹಿತ್ಯ ಕಟ್ಟುವ ಕೆಲಸವಾಗಬೇಕಿದೆ. ಈ ನೆಲ- ಜಲ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಕನ್ನಡದ ಮೂಲೆಮೂಲೆಗೂ ತಲುಪಿಸುವ ಉತ್ತರದಾಯಿತ್ವ ಯುವಕರ ಮೇಲಿದೆ ಎಂದು ಅಣಶಿ ಪ್ರೌಢಶಾಲಾ ಶಿಕ್ಷಕ ವಿಷ್ಣು ಪಟಗಾರ ಹೇಳಿದರು.
ಅವರು ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಕನ್ನಡ ಸಾಹಿತ್ಯ ಸಂಗ್ರಹ ‘ಚಿಗುರು’ ಗೋಡೆ ಬರಹ ಪ್ರತಿ ಉದ್ಘಾಟನೆ ಹಾಗೂ ಗಡಿನಾಡಲ್ಲಿ ಕನ್ನಡ ಕಟ್ಟುವಲ್ಲಿ ಯುವಕರ ಪಾತ್ರ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ, ನಾವು ಬೆಳೆದ ನಾಡಿನ ಋಣ ತೀರಿಸಬೇಕೆಂದರೆ ಕನ್ನಡವನ್ನು ಪ್ರೀತಿಸಬೇಕಿದೆ. ಅನ್ಯಭಾಷೆಯನ್ನು ಆಡಿ, ಪ್ರೀತಿಸಿ. ಆದರೆ ಅನ್ನ ಕೊಟ್ಟ, ಬದುಕು ಕೊಟ್ಟ ನಾಡಭಾಷೆಯನ್ನು ಮರೆಯದಿರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶೈಲಜಾ ಎಚ್.ಕೆ. ಮಾತನಾಡಿ, ಚಿಗುರು ಹೆಮ್ಮರವಾಗುವಂತೆ, ನಿಮ್ಮ ಭಾವನೆಗಳು ಭಿತ್ತಿ ಪತ್ರ ದೊಂದಿಗೆ ಚಿಗುರೋಡೆದು ಸಾಹಿತ್ಯ ಕೃಷಿ ಹೆಮ್ಮರವಾಗಲಿ. ನಿಮ್ಮ ನೆಲದ ಅಸ್ಮಿತೆಯನ್ನು ಮೊದಲು ಗುರುತಿಸಿ ತಮ್ಮದಾಗಿಸಿಕೊಳ್ಳಿ ನಂತರ ಅದನ್ನು ಜಗತ್ತಿಗೆ ನೀಡಿ ಎಂದರು.
ಕನ್ನಡ ನಾಡು ನುಡಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ‘ಚಿಗುರು’ ಗೋಡೆ ಬರಹ ಪ್ರತಿ ಉದ್ಘಾಟಿಸಿದ ಕಸಾಪ ತಾಲೂಕಾ ಅಧ್ಯಕ್ಷ ಪಾಂಡುರoಗ ಪಟಗಾರ ಮಾತನಾಡಿ, ಕನ್ನಡ ಸಾಹಿತ್ಯವನ್ನು, ಬರಹಗಳನ್ನು ಪ್ರೋತ್ಸಾಹಿಸುವ ಈ ಚಿಗುರು ಭಿತ್ತಿ ಪತ್ರಿಕೆ, ಯುವಮನುಸ್ಸುಗಳ ಸಾಹಿತ್ಯಲೋಕದ ಮೊದಲ ಹೆಜ್ಜೆ ಗುರುತಾಗಿದೆ. ಯುವಕರಲ್ಲಿ ಕನ್ನಡ ತನಕ್ಕೆ, ನಾಡು ನುಡಿಯ ತುಡಿತಕ್ಕೆ ನಾಂದಿಯಾಗಿದೆ ಎಂದರು.
ಸಹಪ್ರಾಧ್ಯಾಪಕ ಮೊಹಮ್ಮದ್ ವಾಜಿದ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಸಂಜನಾ ದೇಸಾಯಿ, ಪ್ರಿಯಾಂಕಾ ವೇಳಿಪ ಸಹಕರಿಸಿದರು.