Slide
Slide
Slide
previous arrow
next arrow

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವರ್ಗಾವಣೆಗೊಂಡ ಉಪನ್ಯಾಸಕರಿಗೆ ಸನ್ಮಾನ

300x250 AD

ಅಂಕೋಲಾ: ತಾಲೂಕಿನ ಪೂಜಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಸೇರಿದಂತೆ ಐವರು ಉಪನ್ಯಾಸಕರು ವರ್ಗಾವಣೆಗೊಂಡಿದ್ದು, ಇವರಿಗೆ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಮಂಗಳವಾರ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಚಾರ್ಯ ಡಾ.ಎನ್.ಎಂ.ಖಾನ್, ಉಪನ್ಯಾಸಕ ಡಾ.ದ.ರ.ಹಲ್ಯಾಳ, ಅಬ್ದುಲ್ ನಯಾಮುದ್ದೀನ್ ಡಿ.ಎಚ್., ಜ್ಯೋತಿ ನಾಯಕ, ಡಾ.ಶಬಾನಾಯಾಸ್ಮಿನ್ ಎಂ.ಶೇಖ್ ಇವರು ವರ್ಗಾವಣೆಗೊಂಡಿದ್ದರು. ಸನ್ಮಾನ ಸ್ವೀಕರಿಸಿದ ಡಾ.ಎನ್.ಎಂ.ಖಾನ್ ಮಾತನಾಡಿ, ಕಳೆದ 15 ವರ್ಷಗಳಿಂದ ಈ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯವನ್ನು ನಿರ್ವಹಿಸಿದ್ದೇನೆ. ವರ್ಗಾವಣೆ ಸಹಜವಾಗಿದ್ದು, ಇಲ್ಲಿಯ ವಿದ್ಯಾರ್ಥಿಗಳ ಸ್ಥಳೀಯರ ಸಹಕಾರ ಎಂದೂ ಮರೆಯಲಾಗದು ಎಂದರು.
ನಿವೃತ್ತ ಕಾರ್ಯಾಲಯ ಸಹಾಯಕ ಡಿ.ಜಿ.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವುದರ ಜತೆಗೆ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು. ಉಪನ್ಯಾಸಕ ವೃಂದದವರ ಸಹಕಾರ, ಮಾರ್ಗದರ್ಶನ ಪಡೆದು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ವರ್ಗಾವಣೆಗೊಂಡಿರುವ ಎಲ್ಲ ಉಪನ್ಯಾಸಕರ ಮುಂದಿನ ಜೀವನ ಯಶಸ್ವಿಯಾಗಿರಲಿ ಎಂದರು.
ಹಳೆ ವಿದ್ಯಾರ್ಥಿ ಸಂಘದ ವಿನಾಯಕ ವೆರ್ಣೇಕರ, ಪಲ್ಲವಿ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಪಡೆದು ನಂತರ ಕಾಲೇಜನ್ನು ಮರೆಯಬಾರದು. ಆಯಾ ಸಂದರ್ಭದಲ್ಲಿಯಾದರೂ ಪಾಲ್ಗೊಂಡು ನಾವು ಕಲಿತ ಕಾಲೇಜನ್ನು ಸ್ಮರಿಸಿಕೊಳ್ಳುವುದರ ಜತೆಗೆ ಭಾಗವಹಿಸಬೇಕು. ಬಹುತೇಕ ವಿದ್ಯಾರ್ಥಿಗಳು ಪದವಿ ಪಡೆದ ನಂತರ ಮರಳಿ ಕಾಲೇಜಿನ ಯಾವ ಸಂಪರ್ಕವನ್ನು ಹೊಂದುವುದಿಲ್ಲ. ಆದರೆ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಆಯಾ ಸಮಯದಲ್ಲಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಬರಲಾಗುತ್ತಿದೆ ಎಂದರು.
ಪ್ರಭಾರಿ ಪ್ರಾಚಾರ್ಯೆ ರಾಜೇಶ್ವರಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳೆಯ ವಿದ್ಯಾರ್ಥಿ ಸಂಘದವರು ವರ್ಗಾವಣೆಗೊಂಡಿರುವ ಎಲ್ಲ ಉಪನ್ಯಾಸಕರನ್ನು ಗೌರವಿಸಿರುವುದು ಶ್ಲಾಘನೀಯ ಎಂದರು. ಸನ್ಮಾನ ಸ್ವೀಕರಿಸಿದ ಎಲ್ಲ ಉಪನ್ಯಾಸಕರು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು. ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ನಾಯ್ಕ ಸ್ವಾಗತಿಸಿದರು. ಹಳೆಯ ವಿದ್ಯಾರ್ಥಿ ಸಂಘದ ಖಜಾಂಚಿ ಸೀಮಿತಾ ನಾಯ್ಕ, ಸದಸ್ಯೆ ಭಗವತಿ ಬಂಟ ಉಪಸ್ಥಿತರಿದ್ದರು. ಗ್ರಂಥಪಾಲಕಿ ಸವಿತಾ ನಾಯಕ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top