ಅಂಕೋಲಾ: ಮಂಜಗುಣಿ 500 ಮೀ. ರಸ್ತೆ ಹೊಂಡದಿoದ ಕೂಡಿದ್ದು, ಸ್ಥಳೀಯರ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿಗಳ ನಿಧಿಯಿಂದ ಶಾಸಕಿ ರೂಪಾಲಿ ನಾಯ್ಕ ಅವರ ಪ್ರಯತ್ನದ ಫಲವಾಗಿ 50 ಲಕ್ಷ ರೂ. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮಂಜೂರಿಯಾಗಿ ಟೆಂಡರ್ ಕೂಡ ಮುಗಿದಿತ್ತು. ಆದರೆ ನಿಗದಿತ ಸಮಯದಲ್ಲಿ ಗುತ್ತಿಗೆದಾರ ಕೆಲಸ ಮಾಡದ ಹಿನ್ನೆಲೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ತಿರಮೇಶ ಡಿ. ಎನ್ನುವವರಿಗೆ ಗುತ್ತಿಗೆ ಲಭಿಸಿದ್ದು, ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.
ಸೇತುವೆ ಕಾಮಗಾರಿ ಒಂದೆಡೆ ನಡೆಯುತ್ತಿದ್ದು, ಅಲ್ಲಿ ರಸ್ತೆ ನಿರ್ಮಿಸಬೇಕಾದರೆ 3 ತಿಂಗಳು ರಸ್ತೆ ಸಂಪೂರ್ಣ ಬಂದಾಗಲಿದೆ. ಹೀಗಾಗಿ ಪರ್ಯಾಯ ರಸ್ತೆಯಾಗಿ ಈ ರಸ್ತೆಯನ್ನು ಬಳಸಬೇಕಾಗುತ್ತದೆ. ಇದರಿಂದಾಗಿ ತಕ್ಷಣ ಕಾಮಗಾರಿ ಆರಂಭಿಸಿ 15 ದಿನಗಳ ಒಳಗಾಗಿ ರಸ್ತೆ ಮುಕ್ತಾಯಗೊಳಿಸಬೇಕು ಎಂದು ಸ್ಥಳೀಯರಾದ ಶ್ರೀಪಾದ ಟಿ.ನಾಯ್ಕ ಹೇಳಿದರು. ಗುತ್ತಿಗೆದಾರರು ಕೂಡ 15 ದಿನಗಳ ಒಳಗಾಗಿ 500 ಮೀ. ಉದ್ದದ 50 ಲಕ್ಷ ರೂ. ವೆಚ್ಚದ ಈ ರಸ್ತೆ ಕಾಮಗಾರಿ ಮುಗಿಸುತ್ತೇವೆ. ಬುಧವಾರದಿಂದಲೇ ರಸ್ತೆ ನಿರ್ಮಾಣಕ್ಕೆ ಬೇಕಾಗುವ ಪರಿಕರಗಳನ್ನು ತರಲಾಗುವುದು ಎಂದರು.
ಗ್ರಾ.ಪo.ಸದಸ್ಯ ವೆಂಕಟ್ರಮಣ ಕೆ.ನಾಯ್ಕ ಗುತ್ತಿಗೆದಾರರು ಸಾಮಗ್ರಿಗಳನ್ನು ಹಾಕಿಕೊಡಲು ವ್ಯವಸ್ಥೆ ಕಲ್ಪಿಸಿದರು. ಈ ಸಂದರ್ಭದಲ್ಲಿ ಗಣಪತಿ ಎಸ್.ನಾಯ್ಕ, ಸತೀಶ ನಾಯ್ಕ, ಗುಲಾಬಿ ನಾಯ್ಕ, ನಾಗರಾಜ ನಾಯ್ಕ ಇತರರಿದ್ದರು.