ಶಿರಸಿ: ಟಿಆರ್‌ಸಿ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಹಾಗೂ ಕೃಷಿ, ಕೃಷಿಕ, ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ನ ವತಿಯಿಂದ ಸಹಕಾರ ರತ್ನ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ ಹಾಗೂ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಕಾರ್ಯನಿರ್ವಾಹಕರು ಹಾಗೂ ರಿಟರ್ನಿಂಗ್ ಆಫೀಸರ್‌ಗಳಿಗೆ ಆಯೋಜಿಸಲಾಗಿದ್ದ ಚುನಾವಣಾ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಎನ್. ಹೆಗಡೆ ಗೋರ್ಸಗದ್ದೆ, ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ ಅವುಗಳನ್ನು ಧೈರ್ಯದಿಂದ ಎದುರಿಸಬೇಕಿದೆ. ಸರಕಾರದ ಹಸ್ತಕ್ಷೇಪಗಳು ಸಹಕಾರ ವ್ಯವಸ್ಥೆಗೆ ತೊಡಕನ್ನು ಉಂಟುಮಾಡುತ್ತಿದೆ ಎಂದು ಹೇಳಿದರು.ಸಹಕಾರ ಸಂಘಗಳಿOದ ಮಾತ್ರವೇ ರೈತ ಸದಸ್ಯರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಸಹಕಾರ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬಿ ಈ ವಲಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ವಿ.ಎನ್. ಭಟ್ಟ ಅಳ್ಳಂಕಿ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ರಾಜ್ಯ ಸರಕಾರವು ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಎಲ್ಲಾ ಸಹಕಾರಿಗಳಿಗೆ ಸಂದ ಗೌರವವಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಪ್ರಾರಂಬಿಕ ಟ್ರಸ್ಟಿಯಾಗಿ ಇದೇ ಟ್ರಸ್ಟ್ನ ವತಿಯಿಂದ ಇಂದು ನಾನು ಸನ್ಮಾನ ಸ್ವೀಕರಿಸಿರುವುದು ಸಂತಸ ತಂದಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಹಕಾರಿ ಜಿ.ಟಿ. ಹೆಗಡೆ, ತಟ್ಟೀಸರ ಮಾತನಾಡಿ ಸಹಕಾರ ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಚುನಾವಣೆ ಪ್ರಮುಖ ಪಾತ್ರ ವಹಿಸುತ್ತದೆ. ಸಹಕಾರ ಸಂಘಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ವ್ಯವಹರಿಸಲು ಚುನಾವಣೆ ಸಹಾಯಕವಾಗಿದೆ. ಚುನಾವಣೆ ಪ್ರಕ್ರಿಯೆ ನಡೆಸುವ ಕ್ರಮಬದ್ಧತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ಮಾಹಿತಿ ಪಡೆದುಕೊಳ್ಳಲು ಇಂದಿನ ಕಾರ್ಯಾಗಾರ ಸಹಾಯಕವಾಗಲಿದೆ ಎಂದರು.
ತ್ಯಾಗಲಿ ಸೊಸೈಟಿ ಕಾರ್ಯದರ್ಶಿ ಸುಧಾಕರ ಹೆಗಡೆ ಹಾಗೂ ಯಡಳ್ಳಿ ಸೊಸೈಟಿ ಕಾರ್ಯದರ್ಶಿ ಮುರಳೀಧರ ಹೆಗಡೆ ಸನ್ಮಾನ ಪತ್ರ ವಾಚಿಸಿದರು.
ಸಹಕಾರ ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಚುನಾವಣೆಯ ಮಹತ್ವ ಹಾಗೂ ಮತದಾರರ ಪಟ್ಟಿ ಸಿದ್ಧಪಡಿಸುವ ಕ್ರಮಗಳ ಕುರಿತು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಕಾರವಾರ ಇದರ ನಿವೃತ್ತ ಉಪನಿರ್ದೇಶಕರಾದ ಜಿ.ಕೆ. ರಾಮಪ್ಪ ಹಾಗೂ ಸಹಕಾರ ಸಂಘಗಳ ಚುನಾವಣೆ ಪ್ರಕ್ರಿಯೆಯ ವಿವಿಧ ಹಂತಗಳು ಹಾಗೂ ಕೈಗೊಳ್ಳತಕ್ಕ ಕ್ರಮಗಳ ಕುರಿತು ಸಹಕಾರ ಸಂಘಗಳ ಶಿರಸಿ ಉಪವಿಭಾಗದ ಸಹಾಯಕ ನಿಬಂಧಕರಾದ ಟಿ.ವಿ. ಶ್ರೀನಿವಾಸ ಉಪನ್ಯಾಸ ನೀಡಿದರು.
ಸುಷ್ಮಾ, ಪ್ರಶಾಂತಿ, ಸಹನಾ ಪ್ರಾರ್ಥಿಸಿದರು. ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ನ ಕಾರ್ಯದರ್ಶಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಟಿಆರ್‌ಸಿ ಸಿಬ್ಬಂದಿ ಜಿ.ಜಿ. ಹೆಗಡೆ ಕುರುವಣಿಗೆ ನಿರ್ವಹಿಸಿದರು. ಉ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ಕಾರ್ಯದರ್ಶಿ ಯಶವಂತಕುಮಾರ ಎಚ್. ವಂದಿಸಿದರು.