ಹೊನ್ನಾವರ: ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ (ಮಧ್ಯಾಹ್ನದ ಬಿಸಿ ಊಟ)ದ ಸಾಮಾಜಿಕ ಪರಿಶೋಧನೆಗೆ ಪೂರ್ವಭಾವಿಯಾಗಿ ಆಯ್ಕೆಗೊಂಡ ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಗೆ ಸೋಮವಾರ ಕಾಸರಗೋಡು ಇಕೋ ಪಾರ್ಕ್ನಲ್ಲಿ ಒಂದು ದಿನ ತರಬೇತಿ ಕಾರ್ಯಕ್ರಮ ನಡೆಯಿತು.
ಇಕೋ ಪಾರ್ಕಿನ ನಿಸರ್ಗದ ಮಡಿಲಲ್ಲಿ ಶಿಬಿರಾರ್ಥಿಗಳಿಗೆ ಯೋಜನೆ ಗುರಿ ಉದ್ದೇಶಗಳ ಜೊತೆ ಶಾಲೆಗಳಿಗೆ ಭೇಟಿ ನೀಡಿ ಪರಿಶೋಧನೆ ನಡೆಸುವ ಬಗ್ಗೆ ಪಾಲಕ ಪೋಷಕರು ಹಾಗೂ ಮಕ್ಕಳ ಜೊತೆ ಸಂವಾದ ನಡೆಸುವ ಬಗ್ಗೆ, ದಾಖಲೆ ಪರಿಶೀಲನೆ ನಡೆಸುವ ಬಗ್ಗೆ ಶಾಲಾ ಸಭೆಗಳ ಬಗ್ಗೆ ಸವಿಸ್ತಾರ ಮಾಹಿತಿ ತಿಳಿಸಲಾಯಿತು.
ಭಟ್ಕಳ, ಹೊನ್ನಾವರ ಹಾಗೂ ಕುಮಟಾ ತಾಲೂಕಿನ ಶಿಬಿರಾರ್ಥಿಗಳು ಇಲ್ಲಿ ಪಾಲ್ಗೊಂಡಿದ್ದರು. ಭಟ್ಕಳ ತಾಲೂಕು ಸಾಮಾಜಿಕ ಪರಿಶೋಧನೆ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ಸಾಮಾಜಿಕ ಪರಿಶೋಧನೆ ನಡೆಸುವ ಪ್ರಕ್ರಿಯೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ತಿಳಿಸಿಕೊಟ್ಟರು. ಹೊನ್ನಾವರ ತಾಲೂಕು ಸಾಮಾಜಿಕ ಪರಿಶೋಧನೆ ಕಾರ್ಯಕ್ರಮ ವ್ಯವಸ್ಥಾಪಕ ಚಿದಾನಂದ ಗೌಡರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೊನೆಯದಾಗಿ ಕುಮಟಾ ತಾಲೂಕು ಸಾಮಾಜಿಕ ಪರಿಶೋಧನೆ ಕಾರ್ಯಕ್ರಮ ವ್ಯವಸ್ಥಾಪಕ ಹರೀಶ ವಂದನಾರ್ಪಣೆ ಸಲ್ಲಿಸಿದರು.