ಅಂಕೋಲಾ: ತುಳಸಿ ಗೌಡ ತನ್ನ ಕಾಡಿನ ಜ್ಞಾನದಿಂದಾಗಿ ಬೆಳೆದು ಹೆಮ್ಮರವಾಗಿದ್ದಾರೆ. ಇವರ ಸಾಧನೆಯನ್ನು ಗಮನಿಸಿ ಹಲವು ಪ್ರಶಸ್ತಿಗಳು ಬಂದಿವೆ. ಆದರೆ ದೇಶದ ಉನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ದೇಶದ ಗೌರವ ಹೆಚ್ಚಿಸಿದೆ. ಆದರೆ ಅವರ ಎಲ್ಲ ಸಾಧನೆಗಳ ಮಾಹಿತಿಯುಳ್ಳ ‘ಕಾಡಿನ ತುಳಸಿ’ ಕೃತಿಯು ಅರ್ಥಪೂರ್ಣವಾಗಿ ಮೂಡಿ ಬಂದಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಗೌಡ ಹೇಳಿದರು.
ಕಡಲು ಪ್ರಕಾಶನ, ಅರಣ್ಯ ಇಲಾಖೆ, ಅಗಸೂರು ಗ್ರಾಮ ಪಂಚಾಯತಿ ಇವರ ಆಶ್ರಯದಲ್ಲಿ ಸೋಮವಾರ ಲೇಖಕ ನಾಗರಾಜ ಮಂಜಗುಣಿ ಅವರು ಬರೆದ ‘ಕಾಡಿನ ತುಳಸಿ’ ಕೃತಿಯನ್ನು ಹೊನ್ನಳ್ಳಿಯ ತುಳಸಿ ಗೌಡರ ಮನೆಯಂಗಳದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ತಹಸೀಲ್ದಾರ್ ಸತೀಶ ಗೌಡ ಮಾತನಾಡಿ, ಅರಣ್ಯ ಇಲಾಖೆಯ ನರ್ಸರಿಯಲ್ಲಿ ಕೆಲಸಕ್ಕೆ ಸೇರಿದ ತುಳಸಿ ಗೌಡರು ತಮ್ಮದೇ ಕಾಡಿನ ಜ್ಞಾನದ ಮೂಲಕ ಗಿಡಗಳನ್ನು ಬೆಳೆಸುತ್ತಿದ್ದರು. ಯಾವ ಸಮಯದಲ್ಲಿ ಯಾವ ಪ್ರಬೇದದ ಗಿಡ ಹೂ ಬಿಡುತ್ತದೆ ಮತ್ತು ಅವುಗಳ ಬೀಜದ ಸಂಗ್ರಹಣೆಯ ಕುರಿತು ಅಪಾರ ಜ್ಞಾನ ಹೊಂದಿದ್ದಾರೆ. ಇವರ ಬಗ್ಗೆ ಕೃತಿಯೊಂದು ರಚನೆಯಾಗಿರುವುದು ಸಂತಸದ ಸಂಗತಿ ಎಂದರು.
ಪುರಸಭೆ ಮುಖ್ಯಾಧಿಕಾರಿ ಎನ್.ಎಂ. ಮೇಸ್ತ ಮಾತನಾಡಿ, ಪದ್ಮಶ್ರೀಯ ಮೂಲಕ ನಮ್ಮ ಜಿಲ್ಲೆಯ ಗೌರವ ಹೆಚ್ಚಿಸಿದ ತುಳಸಿ ಗೌಡ ಅವರು ಇನ್ನು ಹಲವು ವರ್ಷ ಬದುಕಿ ಬಾಳುವಂತಾಗಬೇಕು. ಇವರಲ್ಲಿರುವ ಆಳವಾದ ಜ್ಞಾನವನ್ನು ಗುರುತಿಸಿ ಅದನ್ನು ಅನಾವರಣಗೊಳಿಸುವ ಕಾರ್ಯ ಇನ್ನಷ್ಟು ಆಗಬೇಕು ಎಂದರು.
ಪುರಸಭೆ ಸದಸ್ಯ ಪ್ರಕಾಶ ಗೌಡ ಮಾತನಾಡಿ, ನಮ್ಮ ಪದ್ಮಶ್ರೀಯ ಮೂಲಕ ನಮ್ಮ ಸಮಾಜದ ಕೀರ್ತಿಯನ್ನು ರಾಷ್ಟ್ರಮಟ್ಟದವರೆಗೂ ಕೊಂಡೊಯ್ದ ಕೀರ್ತಿ ತುಳಸಿ ಗೌಡರಿಗೆ ಸಲ್ಲುತ್ತದೆ. ಅವರ ಸಾಧನೆಯ ಯಶೋಗಾಥೆಯ ಕುರಿತು ಕೃತಿಯಾಗಿರುವುದು ಹೆಮ್ಮೆಯ ಸಂಗತಿಯಾಗುವುದರ ಜತೆಗೆ ಇದು ಶಾಶ್ವತವಾಗಿ ಉಳಿಯುವಂತಾಗಿದೆ ಎಂದರು.
ವಲಯ ಅರಣ್ಯಾಧಿಕಾರಿ ವಿ.ಜಿ.ನಾಯಕ ಮಾತನಾಡಿ, ಸಾಧಕರ ಸಾಧನೆಯನ್ನು ಹೇಳಿ ಅವರಿಗೆ ಗೌರವವನ್ನು ಸಲ್ಲಿಸಿದರೆ ಸಾಲದು. ಅವರ ವಿಚಾರಧಾರೆಗಳು ಮುಂದಿನ ಪೀಳಿಗೆಗೆ ತಿಳಿಯಬೇಕಾದರೆ ಅದು ಮೊದಲು ದಾಖಲಾಗಬೇಕು. ಅಂತಹ ಕಾರ್ಯವನ್ನು ಲೇಖಕರು ಮಾಡಿದ್ದಾರೆ ಎಂದರು. ಉದ್ಯಮಿ ಗೋಪು ಅಡ್ಲೂರು ಮಾತನಾಡಿ, ತುಳಸಿ ಗೌಡರಿಗೆ ಪ್ರಶಸ್ತಿ ಬಂದಿರುವುದು ನಮ್ಮ ಅಗಸೂರು ಗ್ರಾ.ಪಂ.ಗೆ ಹೆಮ್ಮೆ ಎಂದರು. ಗಣರಾಜ್ಯೋತ್ಸವದಂದು ನಡೆದ ಕರ್ನಾಟಕದ ಪರೇಡ್‌ನಲ್ಲಿ ತುಳಸಿ ಗೌಡರ ಭಾವಚಿತ್ರವಿರುವುದು ನಮ್ಮೆಲ್ಲರಿಗೆ ಹೆಮ್ಮೆ ತರಿಸಿದೆ ಎಂದರು.
ಅಗಸೂರು ಗ್ರಾ.ಪಂ. ಅಧ್ಯಕ್ಷ ರಾಮಚಂದ್ರ ನಾಯ್ಕ ಮಾತನಾಡಿ, ತುಳಸಿ ಗೌಡರು ನಮ್ಮ ಗ್ರಾಮದವರು ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಪ್ರಶಸ್ತಿ ಬಂದ ಸಂದರ್ಭದಲ್ಲಿ ಪಂಚಾಯಿತಿಯಿOದ ರಸ್ತೆ ಸೇರಿದಂತೆ ಅದ್ದೂರಿಯಾಗಿ ಸ್ವಾಗತ ಸನ್ಮಾನ ಮಾಡಲಾಗಿತ್ತು. ಆದರೆ ಈಗ ಅವರ ಬದುಕಿನ ಚಿತ್ರಣವುಳ್ಳ ಕೃತಿ ಬಿಡುಗಡೆಗೊಂಡಿರುವುದು ನಮಗೆ ಇನ್ನಷ್ಟು ಹೆಮ್ಮೆಯಾಗಿದೆ ಎಂದರು.
ನಿವೃತ್ತ ಕಾರ್ಯಾಲಯ ಸಹಾಯಕ ಡಿ.ಜಿ. ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು. ಮಾಸ್ತಿಕಟ್ಟಾ ವಲಯ ಅರಣ್ಯಾಧಿಕಾರಿ ವಿ.ಪಿ. ನಾಯ್ಕ, ರಮೇಶ ಎಸ್. ನಾಯ್ಕ, ಗ್ರಾ.ಪಂ ಸದಸ್ಯರಾದ ನಿರ್ಮಲಾ ನಾಯಕ, ಯಶ್ವಂತ ಗೌಡ, ಶಾಂತಾರಾಮ ನಾಯಕ ಇತರರಿದ್ದರು. ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ ಕೃತಿ ಪರಿಚಯಿಸಿದರೆ, ಲೇಖಕ ನಾಗರಾಜ ಮಂಜಗುಣಿ ಸ್ವಾಗತಿಸಿದರು. ಶಂಕರ ಗೌಡ ನಿರ್ವಹಿಸಿದರು. ಶ್ರೀಪಾದ ಟಿ. ನಾಯ್ಕ ವಂದಿಸಿದರು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ತುಳಸಿ ಗೌಡ ಅವರನ್ನು ಸನ್ಮಾನಿಸಿದರು.