ಶಿರಸಿ: ಜಿಲ್ಲೆಯ ಪ್ರತಿಷ್ಠಿತ ಸ್ಕೊಡ್‌ವೆಸ್ ಸಂಸ್ಥೆಯು ತನ್ನ ಸಿಬ್ಬಂದಿಗಳಲ್ಲಿ ಕ್ರೀಡಾಸ್ಪೂರ್ತಿಯನ್ನು ಉತ್ತೇಜಿಸುವ ಉದ್ದೇಶದಿಂದ ಭಾನುವಾರ ನಗರದ ಎಂ.ಇ.ಎಸ್. ಕಾಲೇಜು ಮೈದಾನದಲ್ಲಿ ಸ್ಕೊಡ್‌ವೆಸ್ ಪ್ರೀಮಿಯರ್ ಲೀಗ್-2023 ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶಿರಸಿ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ ಹೆಗಡೆ, ಸ್ಕೊಡ್‌ವೆಸ್ ಸಂಸ್ಥೆಯು ಸರ್ಕಾರದ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸಾಮಾಜಿಕ ವಲಯದಲ್ಲಿ ತನ್ನದೇ ಚಾಪು ಮೂಡಿಸಿದ್ದು, ಸಂಸ್ಥೆಯು ಭದ್ದತೆ ಮತ್ತು ಗುಣಮಟ್ಟದ ಸೇವೆಯನ್ನು ಒದಗಿಸುವುದರ ಮೂಲಕ ಜಿಲ್ಲೆಯಲ್ಲಿ ಮನೆಮಾತಾಗಿದೆ ಎಂದರು. ಕ್ರೀಡೆ ಎನ್ನುವುದು ಮನುಷ್ಯನ ದೇಹಕ್ಕೆ ಉತ್ತಮ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಆಟಗಾರರಿಗೆ ಶುಭ ಕೋರಿದರು.
ಸ್ಕೊಡ್ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಪ್ರಸ್ತಾವಿಕ ಮಾತನಾಡಿ, ಸಂಸ್ಥೆಯ ವಿವಿಧ ಯೋಜನೆಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳನ್ನು ಪರಸ್ಪರ ಪರಿಚಯಿಸುವುದು, ಸಾಮರ್ಥ್ಯ ಬಲವರ್ಧನೆ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ತಂಡದ ಗೆಲುವಿಗಾಗಿ ಶ್ರಮಿಸುವಂತೆ ತಿಳಿಸಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು ಪ್ರತಿಯೊಬ್ಬರು ಗೆಲುವನ್ನು ಸಾಧಿಸಬೇಕೆಂಬ ಇಚ್ಚೆಯೊಂದಿಗೆ ಅಂಕಣಕ್ಕಿಳಿದಾಗ ಗೆಲುವನ್ನು ಸಾಧಿಸಲು ಸಾಧ್ಯ. ಅದೇ ರೀತಿ ಸಂಸ್ಥೆಯಲ್ಲಿ ತಾವು ನಿರ್ವಹಿಸುವ ಯೋಜನೆಗಳಲ್ಲಿ ನಿಗದಿತ ಗುರಿಯೊಂದಿಗೆ ಯೋಜನೆ ಸಿದ್ದಪಡಿಸಿ ಕಾರ್ಯ ಪ್ರವೃತ್ತರಾದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದರು. ಸಂಸ್ಥೆಯು ಹಲವಾರು ರೀತಿಯ ಕಾರ್ಯಕ್ರಮಗಳನ್ನು ಸಂಘಟಿಸಿದ್ದು, ಈ ಕ್ರಿಕೆಟ್ ಪಂದ್ಯಾವಳಿಯನ್ನು ಮೊದಲ ಬಾರಿಗೆ ಆಯೋಜಿಸುವ ಮೂಲಕ ಸಂಸ್ಥೆಯು ಸಿಬ್ಬಂದಿಗಳಲ್ಲಿ ಕ್ರೀಡಾ ಮನೋಭಾವ, ಕೌಶಲ್ಯ ತುಂಬುವುದರ ಜೊತೆಗೆ ಮನರಂಜನೆ ನೀಡುವ ಉದ್ದೇಶ ಹೊಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಕ್ರೀಡಾಕೂಟಗಳನ್ನು ಸಂಘಟಿಸುವುದಾಗಿ ತಿಳಿಸಿದರು.
ಸಂಸ್ಥೆಯ ವಿವಿಧ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಲ್ಲಿ ಸಹ್ಯಾದ್ರಿ ಲಯನ್ಸ್, ಸ್ಕೊಡ್‌ವೆಸ್ ವೈಲ್ಡ್ ಇಗಲ್ಸ್, ಸಹ್ಯಾದ್ರಿ ಟೈರ್ಸ್, ಸೂಪರ್ ಸ್ಕೊಡ್‌ವೆಸ್ ಎಂಬ ನಾಲ್ಕು ತಂಡಗಳನ್ನು ರಚಿಸಿ ಪಂದ್ಯಾಟ ಏರ್ಪಡಿಸಲಾಗಿತ್ತು. ಅಂತಿಮವಾಗಿ ಸ್ಕೊಡ್‌ವೆಸ್ ವೈಲ್ಡ್ ಈಗಲ್ಸ್ ವಿಜಯಶಾಲಿಯಾಗುವ ಮೂಲಕ ಪ್ರಶಸ್ತಿ ಪಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಉದ್ಯಮಿ ಭೀಮಣ್ಣ ನಾಯ್ಕ ಪಾಲ್ಗೊಂಡು, ಸಂಸ್ಥೆಯ ಕಾರ್ಯಚಟುವಟಿಕೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಸಂಸ್ಥೆಯು ಇನ್ನಷ್ಟು ಉತ್ತುಂಗಕ್ಕೆ ಬೆಳೆಯಲಿ ಎಂದು ಆಶಿಸಿದರು.
ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ.ಕೂರ್ಸೆ, ಸಹಕಾರ್ಯದರ್ಶಿ ದಯಾನಂದ ಆಗಾಸೆ, ಆಡಳಿತಾಧಿಕಾರಿ ಹಾಗು ಕಾರ್ಯದರ್ಶಿಯಾದ ಸರಸ್ವತಿ ಎನ್. ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.