ಬೆಂಗಳೂರು : ದೇಶ ವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುವ ‘ಹಲಾಲ್ ಪ್ರಮಾಣ ಪತ್ರ’ಕ್ಕೆ ಅವಕಾಶ ನೀಡುವುದಿಲ್ಲವೆಂದು ಹಿಂದೂ ರಾಷ್ಟ್ರ ಅಧಿವೇಶದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ ತಿಳಿಸಿದರು. ಅಧಿವೇಶನದ ಎರಡನೇ ದಿನ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ 200 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.
ರಮೇಶ್ ಶಿಂಧೆ ಇವರು ಮಾತನಾಡಿ, ಭಾರತವನ್ನು ‘ಹಲಾಲ್ ಮುಕ್ತ’ಗೊಳಿಸಲು ತೀವ್ರ ಹೋರಾಟ ನಡೆಸಲಾಗುವುದು, ದೇಶದಲ್ಲಿ ಸೆಕ್ಯುಲರ್ ವಾದವನ್ನು ಮಂಡಿಸಲಾಗುತ್ತದೆ. 1976ರ ತುರ್ತು ಪರಿಸ್ಥಿತಿಯಲ್ಲಿ ಭಾರತವನ್ನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಬಹುದಾದರೆ 2025 ರಲ್ಲಿ ಅದನ್ನು ತೆಗೆಯಲು ಸಾಧ್ಯವಿದೆ, ಸಂವಿಧಾನದ ಪ್ರಕಾರ 20% ಇರುವವರಿಗಾಗಿ ಪ್ರತ್ಯೇಕ ಮೀಸಲಾತಿ, ಸಚಿವರು ಇದ್ದಾರೆ. ಅದೇ ರೀತಿ 80% ಜನರಿಗಾಗಿ ಪ್ರತ್ಯೇಕ ಸಚಿವರು ಏಕಿಲ್ಲ, ಇಲ್ಲಿ ಸಮನತೆಯ ಹಕ್ಕು ಎಲ್ಲಿದೆ ? ಇದಕ್ಕಾಗಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಹಿಂದೂಗಳು ಸರಕಾರಕ್ಕೆ ಆಗ್ರಹಿಸಬೇಕು’ ಎಂದರು.
ಸ್ವಾತಂತ್ರ್ಯ ದೊರಕಿ 75 ವರ್ಷಗಳು ಕಳೆದರೂ ಇಂದಿಗೂ ಭಾರತೀಯ ಸೇನೆಯಲ್ಲಿ 300 ವರ್ಷಗಳಿಂದಲೂ ಬ್ರಿಟಿಷ್ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು, ಈ ಕುರಿತು ಮಾನ್ಯ ಪ್ರಧಾನ ಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಲಾಯಿತು. ಇದರ ಪರಿಣಾಮವಾಗಿ ಕಳೆದ ಕೆಲವು ತಿಂಗಳಿನಿಂದ ಸೇನೆಯ ಕೆಲವು ಚಿಹ್ನೆಗಳಲ್ಲಿ ಬದಲಾವಣೆಗಳನ್ನು ತಂದಿರುವುದನ್ನು ನಾವು ಕಾಣಬಹುದು. ಭಾರತೀಯ ಸೇನೆಗೆ ಸುಭಾಷ್ ಚಂದ್ರ ಬೋಸ್ ಹಾಗೂ ಅವರ ಅನುಯಾಯಿಗಳ ಕೊಡುಗೆ ಅಪಾರವಾಗಿದೆ, ಆದರೆ ಎಲ್ಲಿಯೂ ಈ ಕುರಿತ ಉಲ್ಲೇಖ ಕಾಣುವುದಿಲ್ಲ’ ಇದಕ್ಕಾಗಿ ನಾವೆಲ್ಲರೂ ಸರಕಾರಕ್ಕೆ ಆಗ್ರಹ ಮಾಬೇಕಿದೆ’ ಎಂದರು.
ಹಿಂದೂ ರಾಷ್ಟ್ರದ ಬೇಡಿಕೆ ಎಂದರೆ ಕೇವಲ ಸಂವಿಧಾನಿಕ ಬದಲಾವಣೆ ಅಲ್ಲ, ನಮಗೆ ಧರ್ಮದ ಆಧಾರವಿರುವ ಹಿಂದೂ ರಾಷ್ಟ್ರದ ಸ್ಥಾಪನೆ ಅಗತ್ಯವಿದೆ. ದೇಶವು ವಿಕಾಸವಾಗುತ್ತಿದೆ ಎಂದರೆ ಆ ದೇಶವು ಪ್ರಗತಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ನಮಗೆ ರಾಮರಾಜ್ಯದಂತಹ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆಯಿದೆ. ಇದಕ್ಕಾಗಿ ಎಲ್ಲಾ ಹಿಂದೂ ಸಂಘಟನೆಗಳು ಒಗ್ಗೂಡಿ ಹೋರಾಡಬೇಕಿದೆ’ ಎಂದರು. ರಾಷ್ಟ್ರ ಧರ್ಮದ ಸಂತೋಷ್ ಕೆಂಚಾಂಬ ಮಾತನಾಡಿ, ನಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಸೆಕ್ಯುಲರ್ ವಾದಿಗಳ ಷಡ್ಯಂತ್ರವನ್ನರಿತು ಹಿಂದೂಗಳು ಜಾಗೃತರಾಗಬೇಕಿದೆ, ಹಿಂದೂಗಳು ಹಿಂದೂ ಧರ್ಮದಲ್ಲಿ ಹೇಳಿರುವಂತೆ ಧರ್ಮಚರಣೆಯನ್ನು ಮಾಡಬೇಕು, ಸದ್ಯದ ದಿನಗಳಲ್ಲಿ ಅತ್ಯಂತ ಪ್ರಭಾವವನ್ನು ಬೀರುತ್ತಿರುವ ಸೋಶಿಯಲ್ ಮೀಡಿಯಾ ಮಾಧ್ಯಮಗಳನ್ನು ಬಳಸಿಕೊಂಡು ಧರ್ಮ ಜಾಗೃತಿ ಕಾರ್ಯವನ್ನು ಮಾಡೋಣ’ ಎಂದರು. ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಮಾತನಾಡಿ, ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯ ಮಾಡಲು ಹಿಂದೂಗಳು ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಬೇಕಿದೆ, ಇಂದಿನ ಸ್ಥಿತಿಯಲ್ಲಿ ಪಾಕಿಸ್ತಾನ ಅಥವಾ ಚೀನಾದೊಂದಿಗೆ ಯಾವುದೇ ಸಮಯದಲ್ಲಿ ಯುದ್ಧ ಪ್ರಾರಂಭವಾಗಬಹುದು, ದೇಶದ ಒಳಗೂ ಗಲ್ಲಿ ಗಲ್ಲಿಗಳಲ್ಲಿ, ಬೀದಿಬೀದಿಗಳಲ್ಲಿ ಕುಳಿತು ಭಾರತದ ವಿರುದ್ಧ ಕುತಂತ್ರ ನಡೆಸುತ್ತಿದ್ದಾರೆ. ಮುಂದೆ ಅತೀವೃಷ್ಟಿ ಅನಾವೃಷ್ಟಿ, ಭೂಕಂಪದಂತಹ ಸ್ಥಿತಿ ಉಂಟಾಗಬಹುದೆಂದು ಅನೇಕ ದಾರ್ಶನಿಕರು, ದೃಷ್ಟಾರರು, ಸಂತ-ಮಹಾತ್ಮರೂ ಸಹ ಮೊದಲೇ ಹೇಳಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟು ಆಪತ್ಕಾಲದಲ್ಲಿ ರಕ್ಷಣೆಯಾಗಲು ಆಧ್ಯಾತ್ಮಿಕ ಸಾಧನೆಯನ್ನು ಉತ್ತಮ ರೀತಿಯಲ್ಲಿ ಮಾಡಬೇಕು’ ಎಂದರು. ಕೊನೆಯಲ್ಲಿ ಉಪಸ್ಥಿತ ಎಲ್ಲಾ ಹಿಂದೂ ಬಾಂಧವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿಜ್ಞೆ ಮಾಡಿದರು. ಸಂಪೂರ್ಣ ವಂದೇ ಮಾತರಂ ಗೀತೆಯೊಂದಿಗೆ ಅಧಿವೇಶನದ ಮುಕ್ತಾಯ ಮಾಡಲಾಯಿತು.