ಕುಮಟಾ: ರಥ ಸಪ್ತಮಿಯ ದಿನವಾದ ಶನಿವಾರ ಪಟ್ಟಣದ ಶ್ರೀವೆಂಕಟರಮಣ ದೇವರ ಮಹಾರಥೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಪಟ್ಟಣದ ರಥಬೀದಿಯಲ್ಲಿ ನೆಲೆಸಿರುವ ಶ್ರೀವೆಂಕಟರಮಣ ದೇವರ ಜಾತ್ರೆಯ ಪ್ರಯುಕ್ತ ದೇವರ ಪಲ್ಲಕಿ ಮೆರವಣಿಗೆ ಹಾಗೂ ವಿವಿಧ ಸಾಂಪ್ರದಾಯಿಕ ಆಚರಣೆಗಳು ಸಾಂಗವಾಗಿ ನಡೆದವು. ಇಂದು ಬೆಳಗ್ಗೆಯಿಂದಲೆ ಭಕ್ತಾಧಿಗಳು ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಹಣ್ಣು- ಕಾಯಿ ಪೂಜಾ ಸೇವೆ ಸಲ್ಲಿಸಿದರು. ಕೆಲವರು ವಿವಿಧ ಹರಕೆಗಳನ್ನು ಅರ್ಪಿಸಿ, ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ನಂತರ ದೇವರ ಮೂರ್ತಿಯನ್ನು ರಥದಲ್ಲಿ ಕೂರಿಸಿ, ಪೂಜೆ ಸಲ್ಲಿಸಿದ ಬಳಿಕ ಮಹಾ ರಥಾರೋಹಣ ನೆರವೇರಿಸಲಾಯಿತು. ಸಾವಿರಾರು ಭಕ್ತಾಧಿಗಳು ರಥಾರೋಹಣದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಪಟ್ಟಣದ ಮೂರುಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ ಜಾತ್ರೆ ಪೇಟೆ ಕಳೆಕಟ್ಟಿತ್ತು. ಮಕ್ಕಳು, ಮಹಿಳೆಯರು ತಮಗಿಷ್ಟವಾದ ತಿಂಡಿ-ತನಿಸು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಖರೀದಿಸುವ ಮೂಲಕ ಖುಷಿಪಟ್ಟರು. ಜಾತ್ರೆ ಪೇಟೆಯೂದ್ದಕ್ಕೂ ಜನಜಂಗುಳಿಯಿಂದ ಕೂಡಿದ್ದರಿಂದ ಬಸ್ತಿಪೇಟೆ ಕ್ರಾಸ್‌ನಲ್ಲಿಯೇ ವಾಹನ ನಿಲ್ಲಿಸಿ, ಜಾತ್ರೆ ಮಾರುಕಟ್ಟೆಯಲ್ಲಿ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ ಸುಭಾಸ್ ರಸ್ತೆ ಹಾಗೂ ಬಸ್ತಿಪೇಟೆ ರಸ್ತೆಯುದ್ದಕ್ಕೂ ವಾಹನಗಳು ಸಾಲು ಸಾಲಾಗಿ ನಿಂತಿದ್ದರಿಂದ ಟ್ರಾಫಿಕ್ ಸಮಸ್ಯೆಯೂ ಎದುರಾಗಿತ್ತು. ಪೊಲೀಸರು ವಾಹನಗಳು ನಿಧಾನವಾಗಿ ತೆರಳಲು ವ್ಯವಸ್ಥೆ ಮಾಡಿಕೊಡುವ ಮೂಲಕ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂತು.