ಹೊನ್ನಾವರ: ಅರಣ್ಯ ಹಕ್ಕು ಕಾಯಿದೆ ಮತ್ತು ಸರಕಾರದ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಸ್ಥಳೀಯ ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳಿಗೆ ದೌರ್ಜನ್ಯವೆಸಗುವ ಮೂಲಕ ಕಾನೂನು ಮತ್ತು ಸರಕಾರದ ಆದೇಶವನ್ನು ಉಲ್ಲಂಘಿಸಿರುವುದರಿಂದ ಅಂತಹ ಅರಣ್ಯ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಹೊನ್ನಾವರ ತಾಲೂಕಿನ, ಗೇರಸೊಪ್ಪ ವಲಯ ಕಛೇರಿ ಕಾರ್ಯವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿಗಳಿಂದ ಉಂಟಾಗಿರುವ ದೌರ್ಜನ್ಯವೆಸಗಿದ ಸ್ಥಳಗಳಿಗೆ ಭೇಟ್ಟಿ ನೀಡಿ ಮೇಲಿನಂತೆ ಮಾತನಾಡಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತಹ ಅರಣ್ಯವಾಸಿಗಳ ಅಧಿಭೋಗದಲ್ಲಿರುವ ಅತಿಕ್ರಮಣ ಕ್ಷೇತ್ರಕ್ಕೆ ಕಾನೂನಿಗೆ ವ್ಯತಿರಿಕ್ತವಾಗಿ ಆತಂಕಪಡಿಸಬಾರದೆಂಬ ಆದೇಶವಿದ್ದಾಗಲೂ ಅರಣ್ಯ ಸಿಬ್ಬಂದಿಗಳು ಪದೇ ಪದೇ ಅರಣ್ಯವಾಸಿಗಳಿಗೆ ಕಿರುಕುಳ ಮತ್ತು ಹಿಂಸೆ ನೀಡುತ್ತಿರುವುದು ಖೇದಕರವೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಕೇತ್ ನಾಯ್ಕ, ರಾಮು ಮರಾಠಿ, ವಿನೋಧ ನಾಯ್ಕ, ಗಣೇಶ್ ನಾಯ್ಕ, ಅಣ್ಣಪ್ಪ ನಾಯ್ಕ, ಗಣಪತಿ ಗೌಡ, ರಾಜು ನಾಯ್ಕ ಗೆರಸೊಪ್ಪ ಮುಂತಾದವರು ಉಪಸ್ಥಿತರಿದ್ದರು.
ಅರಣ್ಯ ಕಛೇರಿಗೆ ಮುತ್ತಿಗೆ:
ಪದೇ ಪದೇ ಹೊನ್ನಾವರ ತಾಲೂಕಿನ ಗೆರಸೊಪ್ಪ ವಲಯ ಅರಣ್ಯ ಕ್ಷೇತ್ರದಲ್ಲಿ ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳು ದೌರ್ಜನ್ಯವೆಸಗುವ ಪ್ರಕರಣ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಗೇರಸೊಪ್ಪ ಅರಣ್ಯ ವಲಯ ಕಛೇರಿಗೆ ಮುಂದಿನ ದಿನಗಳಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.