ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖದಲ್ಲಿ ಬಾಲವಿಕಾಸ ಅಕಾಡೆಮಿ ಧಾರವಾಡ ಹಾಗೂ ಪ್ರೇರಣಾ ಸಂಸ್ಥೆ ಗುಂದ ಇವರ ಸಹಯೋಗದಲ್ಲಿ ಚಿಣ್ಣರ ಉತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹಮ್ಮದ್ ಶೇಖ್ ಉದ್ಘಾಟಿಸಿ ಮಾತನಾಡಿ, ಸಣ್ಣ ವಯಸ್ಸಿನಲ್ಲಿಯೇ ಮಕ್ಕಳ ಪ್ರತಿಭೆಗೆ ಅವಕಾಶ ನೀಡಿದಾಗ ಮಾತ್ರ ಮಕ್ಕಳು ಸಾಧನೆ ಮಾಡಲು ಸಾಧ್ಯ. ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವ ಪ್ರೇರಣಾ ಸಂಸ್ಥೆಯ ಕಾರ್ಯ ಶ್ಲಾಘನೀಯ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಕ್ರೀಡೆಗಳಲ್ಲಿಯೂ ಮಕ್ಕಳಿಗೆ ಸೂಕ್ತ ವೇದಿಕೆ ಬೇಕಾಗಿದೆ, ಪ್ರೇರಣಾ ಸಂಸ್ಥೆಯವರು ಮಹಿಳೆಯರೆ ಕಾರ್ಯಕ್ರಮ ಸಂಘಟಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ನoದಿಗದ್ದಾ ಗ್ರಾ.ಪಂ.ಉಪಾಧ್ಯಕ್ಷ ಅರುಣ ದೇಸಾಯಿ ಮಾತನಾಡಿ ಪ್ರೇರಣಾ ಸಂಸ್ಥೆಯವರು ಚಿಣ್ಣರ ಉತ್ಸವವನ್ನು ಮಾಡುವುದರ ಮೂಲಕ ಮಕ್ಕಳ ಪ್ರತಿಭೆಗೆ ಅವಕಾಶ ನೀಡುತ್ತಿದ್ದಾರೆ, ಉತ್ತಮ ಸಂಘಟನೆಯಿoದ ಎಲ್ಲರಿಗೂ ಅವಕಾಶ ನೀಡುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ನಂದಿಗದ್ದಾ ಗ್ರಾ.ಪಂ.ಅಧ್ಯಕ್ಷೆ ಸುಮನಾ ಹರಿಜನ, ಸದಸ್ಯೆ ದಾಕ್ಷಾಯಿಣಿ ದಾನಶೂರ, ಮನುವಿಕಾಸ ಸಂಸ್ಥೆ ನಿರ್ದೇಶಕ ಗಣಪತಿ ಭಟ್ಟ, ಧಾರವಾಡದ ಪ್ರಕಾಶ ಮಲ್ಲಿಗೆವಾಡಾ ಪ್ರೇರಣಾ ಸಂಸ್ಥೆ ಅಧ್ಯಕ್ಷೆ ಸುಕನ್ಯಾ ದೇಸಾಯಿ, ಮಹೇಶ ಭಟ್ಟ, ಸುಮಾ ಹೆಗಡೆ,ಸೀತಾ ದಾನಗೇರಿ ಇತರರು ಉಪಸ್ಥಿತರಿದ್ದರು. ಮಹಿಳೆಯರು ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.