ಯಲ್ಲಾಪುರ: ಶ್ರೀವನರಾಗ ಶರ್ಮಾ ಅಭಿನಂದನಾ ಸಮಿತಿ, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಗಮಕ ಕಲಾ ಪರಿಷದ್, ಸ್ವಾಮಿ ವಿವೇಕಾನಂದ ಸೇವಾ ಬಳಗ ವಜ್ರಳ್ಳಿ, ಮಾತೃ ಭೂಮಿ ಸೇವಾ ಪ್ರತಿಷ್ಠಾನ ಸಹಯೋಗದಲ್ಲಿ ಫೆ.5ರಂದು ಪಟ್ಟಣದ ಅಡಿಕೆ ಭವನದಲ್ಲಿ ಸಮಕಾಲಿನ ಶ್ರೇಷ್ಠ ಬರಹಗಾರರಾದ ವನರಾಗ ಶರ್ಮಾ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀವನರಾಗ ಶರ್ಮ ಅಭಿನಂದನಾ ಸಮಿತಿಯ ಅಧ್ಯಕ್ಷ ಡಿ.ಶಂಕರ ಭಟ್ಟ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ. ನಾಯಕ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಎಂಎಲ್‌ಎ ಕಾಲೇಜಿನ ಪ್ರಾಚಾರ್ಯ ಹಾಗೂ ಕವಿ ಡಾ.ಗಣಪತಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಗ್ಗ ಪ್ರವಚನಕಾರರಾದ ತಿಮ್ಮಣ್ಣ ಭಟ್ ಬೆಂಗಳೂರು, ಶ್ರೀಮದ್ ಭಗವದ್ ಪಾದ ಪ್ರಕಾಶನ ಕಾರ್ಯದರ್ಶಿ ಕೆ ವಿ ಭಟ್, ಸೋಂದ ಸ್ವರ್ಣವಲ್ಲಿ ಮಹಾಸಂಸ್ಥಾನ ಕಾರ್ಯ ನಿರ್ವಹಣಾಧಿಕಾರಿ ಎಸ್.ಎನ್. ಗಾಂವ್ಕರ, ಶಿರಸಿ ಕಸಾಪ ಅಧ್ಯಕ್ಷ ಜಿ. ಸುಬ್ರಾಯ ಭಟ್ಟ ಹಾಗೂ ಯಲ್ಲಾಪುರ ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮದ ನಂತರ ಹಿರಿಕಿರಿಯ ಕವಿಗಳಿಂದ ಕವಿಗೋಷ್ಠಿ ನಡೆಯಲಿದೆ. ನಂತರ ಮಧುರ ರಾಮಾಯಣ ಗಮಕವಾಚನ ಪ್ರವಚನ ನಡೆಯಲಿದ್ದು, ಮುಕ್ತಾ ಶಂಕರ್ ವಾಚಿಸಲಿದ್ದಾರೆ. ಡಿ.ಕೆ.ಗಾಂವ್ಕರ್ ಪ್ರವಚನ ನೀಡಲಿದ್ದಾರೆ. ಮಧ್ಯಾಹ್ನದ ನಂತರ ಧಾರವಾಡ ದ್ವಾರಪುರ ಮಠದ ಪೂಜ್ಯ ಪರಮಾತ್ಮಾಜಿ ಮಹಾರಾಜ ಸಾನಿಧ್ಯವಹಿಸಿ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅಭಿನಂದನಾ ಗ್ರಂಥ ಲೋಕಾರ್ಪಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಉಪಸ್ಥಿತರಿರಲಿದ್ದಾರೆ. ಹಿರಿಯ ಚಿಂತಕರಾದ ಪ್ರಮೋದ ಹೆಗಡೆ ಅಭಿನಂದನಾ ನುಡಿಗಳನ್ನು ಆಡಲಿದ್ದು, ಶ್ರೀಮಾತಾ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ, ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ನಂತರ, ಭೀಷ್ಮ ವಿಜಯ ತಾಳಮದ್ದಲೆ ನಡೆಯಲಿದ್ದು, ಅನಂತ ಹೆಗಡೆ ದಂತಳಿಗೆ, ಗಣಪತಿ ಭಾಗವತ್ ಕವ್ವಾಳೆ ಹಿಮ್ಮೇಳದಲ್ಲಿ, ಅರ್ಥಧಾರಿಗಳಾಗಿ ಎಂ.ಎನ್.ಹೆಗಡೆ ಹಳವಳ್ಳಿ, ಗಣಪತಿ ಭಟ್ ಸಂಕದಗುoಡಿ, ನಾರಾಯಣ ದೇಸಾಯಿ, ಡಾ.ಡಿ.ಕೆ.ಗಾಂವ್ಕರ್ ಇರುವರು ಎಂದು ಮಾಹಿತಿ ನೀಡಿದರು.
ಶ್ರೀವನರಾಗ ಶರ್ಮ ಅಭಿನಂದನಾ ಸಮಿತಿಯ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ, ಕಾರ್ಯಾಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಗಾಂವ್ಕರ್ ಪತ್ರಿಕಾಗೋಷ್ಠಿಯಲ್ಲಿದ್ದು ಮಾಹಿತಿ ನೀಡಿದರು.