ಯಲ್ಲಾಪುರ: ಅನೇಕ ಕಾರಣಗಳಿಂದ ಊರು, ತಾಲೂಕನ್ನು ತೊರೆದು ಬೇರೆ ಬೇರೆ ಭಾಗಗಳಲ್ಲಿ ನೆಲೆಸಿರುವ ಆತ್ಮೀಯರೆಲ್ಲರನ್ನೂ ಒಂದೆರಡು ಗಂಟೆಗಳ ಮಟ್ಟಿಗಾದರೂ ಒಂದೆಡೆ ಕಲೆತು-ಬೆರೆಯುವಂತೆ ಮಾಡಿ, ಹಳ್ಳಿ ಸೊಗಡಿನ ಆಲೆಮನೆಯ ಹಬ್ಬದ ವಾತಾವರಣ ಸೃಷ್ಟಿಸಬೇಕೆಂಬ ಧ್ಯೇಯದೊಂದಿಗೆ 6ನೇ ವರ್ಷದ ಮಾಗೋಡ ಆಲೆಮನೆ ಹಬ್ಬವನ್ನು ಆಯೋಜಿಸಲಾಗಿದೆ.
ಜ.28 ಶನಿವಾರದಂದು ಸಂಜೆ 5 ಗಂಟೆಯಿಂದ ಪ್ರಾರಂಭವಾಗಲಿರುವ ಆಲೆಮನೆ ಹಬ್ಬಕ್ಕೆ ಸಂಭ್ರಮದ ತಯಾರಿ ನಡೆದಿದ್ದು ಸರ್ವರಿಗೂ ಸ್ವಾಗತವನ್ನು ಕೋರಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಗೋವರ್ಧನ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದ್ದು, ವಿವಿಧ ಜಾನಪದ ಕಲೆಗಳ ಪ್ರದರ್ಶನ ಈ ಬಾರಿಯ ವಿಶೇಷತೆಯಾಗಿದೆ. ಸ್ಥಳೀಯ ಕಲಾವಿದರಿಂದ ಕೋಲಾಟ, ಗೋಪಾಲಕೃಷ್ಣ ಭಾಗ್ವತ ಗುಡ್ನಮನೆ ಅವರಿಂದ ಸಂಗೀತ ಕಾರ್ಯಕ್ರಮ, ಹಾವೇರಿಯ ಗಂಗಾಪರಮೇಶ್ವರಿ ಸಂಘದಿಂದ ಡೊಳ್ಳಿನ ಪದ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನರಸೂರಿನ ದುರ್ಗಾಪರಮೇಶ್ವರಿ ಕಲಾ ತಂಡದಿಂದ ಡಮಾಮ ನೃತ್ಯ, ವಿಶ್ಲೇಶ್ವರ ಕುಂಟೆಮನೆ ತಂಡದಿಂದ ಯಕ್ಷ ಗಾನ ನೃತ್ಯ ಕಾರ್ಯಕ್ರಮ ನಡೆಯಲಿದೆ.