ಶಿರಸಿ: ಬನವಾಸಿಯಲ್ಲಿ ಟಿಎಂಎಸ್ ಸಂಸ್ಥೆ ಆರಂಭಿಸಿರುವ ನೂತನ ಸೂಪರ್ ಮಾರ್ಟನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಶುಕ್ರವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸಹಕಾರಿ ಕ್ಷೇತ್ರ ಪ್ರಬಲಗೊಳಿಸಿಕೊಳ್ಳದಿದ್ದರೆ ರೈತರ ಬದುಕಿನಲ್ಲಿ ನೆಮ್ಮದಿ ಸಾಧ್ಯವಿಲ್ಲ ಎಂದು ಹೇಳಿದರು.
ಉತ್ತರಕನ್ನಡ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಗಟ್ಟಿಯಾಗಿರುವ ಜೊತೆ ಈ ಕ್ಷೇತ್ರದ ಬೆನ್ನೆಲುಬನ್ನೂ ಗಟ್ಟಿಯಾಗಿಸಿದೆ. ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಸಿಗುವ ನೆಮ್ಮದಿ ಬೇರೆಡೆ ಸಿಗುವುದಿಲ್ಲ. ರಾಜ್ಯದಲ್ಲಿ 9 ಜಿಲ್ಲೆ ಹೊರತುಪಡಿಸಿ ಉಳಿದೆಡೆ ಸಹಕಾರಿ ಕ್ಷೇತ್ರ ಗಟ್ಟಿ ಇಲ್ಲ. ಎಲ್ಲಿ ಸಹಕಾರಿ ಕ್ಷೇತ್ರ ಗಟ್ಟಿ ಇರುತ್ತದೆಯೋ ಅಲ್ಲಿ ರೈತರು ನೆಮ್ಮದಿಯ ಜೀವನ ಕಂಡುಕೊಳ್ಳುತ್ತಾರೆ. ರೈತಾಪಿಗಳು ಸರ್ಕಾರಿ ಸೌಲಭ್ಯ ಪಡೆಯಲು ಸಹಕಾರಿ ಕ್ಷೇತ್ರ ಪ್ರಬಲಗೊಳಿಸಬೇಕು. ಸುಪರ್ ಮಾರ್ಕೆಟ್ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಆರಂಭವಾಗಿದ್ದು ಇದರ ಶ್ರೇಯಸ್ಸು ಸಹಕಾರಿ ಸಂಘಗಳಿಗೆ ಸೇರುತ್ತದೆ ಎಂದರು.
ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಪ್ರಾಸ್ತಾವಿಕ ಮಾತನಾಡಿ, ಬನವಾಸಿಯಲ್ಲಿ 15 ವರ್ಷದ ಹಿಂದೆಯೇ ನಮ್ಮ ಕಚೇರಿ ಆರಂಭಿಸಿದ್ದೆವು. ಇಲ್ಲಿ ಉತ್ತಮ ಗುಣಮಟ್ಟದ ಗೊಬ್ಬರ ಪೂರೈಸುತ್ತಿದ್ದೆವು. ಬನವಾಸಿ ಅಡಕೆಯ ಪ್ರಮುಖ ಸ್ಥಳವಾಗಿದೆ. ಹಸಿ ಮೇವು, ಸಾವಯವ ಗೊಬ್ಬರದ ಮೂಲಕ ಬನವಾಸಿ ಭಾಗದವರೊಂದಿಗೆ ನಾವು ನಿಂತಿದ್ದೇವೆ ಎಂದರು.
ಎಪಿಎಂಸಿ ಅಧ್ಯಕ್ಷ ಪ್ರಶಾಂತ ಗೌಡ್ರು ಮಾತನಾಡಿ, ಇತ್ತೀಚೆಗೆ ರೈತ ಸಮುದಾಯ ಅಡಕೆ ಕ್ಷೇತ್ರದ ಕಡೆ ವಾಲಿದೆ. ಈ ಭಾಗದಲ್ಲಿ ಅನೇಕ ಹೊಸ ಬೆಳೆ ಬಂದು ರೈತ ಸಮುದಾಯಕ್ಕೆ ಭರವಸೆ ಮೂಡಿಸಿದೆ. ಆದರೆ, ಅಡಕೆ ಹೊರತಾಗಿ ಬೇರೆ ಬೆಳೆ ಬಗ್ಗೆ ಲಕ್ಷ್ಯ ಹಾಕದಿರುವುದು ಖೇದ. ಹೊಸ ಬೆಳೆ ಬಗ್ಗೆ ಗಮನಿಸಬೇಕಿದೆ. ಅಡಕೆ ಸಾಧಕ ಬಾಧಕ ಬಗ್ಗೆಯೂ ನಾವು ಪರಾಮರ್ಷೆ ಮಾಡಿಕೊಳ್ಳಬೇಕಿದೆ ಎಂದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನಮನೆ ಮಾತನಾಡಿ, ಆರ್ಥಿಕ ಚೌಕಟ್ಟು ಅಳವಡಿಸಿಕೊಂಡ ಸಂಸ್ಥೆ ಟಿಎಂಎಸ್ ಸಂಸ್ಥೆಯ ಕಠಿಣ ನಿಲುವುಗಳು ಸದಸ್ಯರು ಪ್ರಬಲವಾಗಿ ನಿಲ್ಲುವಂತೆ ಮಾಡಿದೆ ಎಂದರು.
ಎಪಿಎಂಸಿ ವ್ಯವಸ್ಥಾಪಕ ವಿ.ಆರ್. ಜಯಕುಮಾರ, ಟಿಎಂಎಸ್ ಉಪಾಧ್ಯಕ್ಷ ಎಂ.ಪಿ.ಹೆಗಡೆ ಹೊನ್ನೆಕಟ್ಟಾ ಇತರರು ಉಪಸ್ಥಿತರಿದ್ದರು.