ಶಿರಸಿ: ಇಂದು 74ನೇ ಗಣರಾಜ್ಯೋತ್ಸವ. ಆತ್ಮ ನಿರ್ಭರ ಭಾರತ ಯೋಜನೆ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದೆ. ನಾವಿಂದು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಹಾದಿಯಲ್ಲಿ ಇದ್ದೇವೆ. ಯುವಜನತೆಯಿಂದ ಕೂಡಿರುವ ದೇಶ ನಮ್ಮದು. ಸುಭದ್ರತೆಯ ಎಡೆಗೆ ಸಾಗುತ್ತಿರುವುದು ಸಂತೋಷದ ಸಂಗತಿ. ಎಂದು ಎಂಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್ ಹಳೆಮನೆ ಹೇಳಿದರು.
ಅವರು ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಿಕ್ಷಣದಲ್ಲಿ ಕ್ರಾಂತಿಕಾರಕ ಬೆಳವಣಿಗೆಯನ್ನು ನಾವು ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆದ ರಾಷ್ಟ್ರವಾಗಿ ನಿಂತಿದ್ದೇವೆ. ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಪ್ರಪಂಚಕ್ಕೆ ಮಾದರಿಯಾಗುವ ಹಾದಿಯಲ್ಲಿ ಸಾಗುತ್ತಿದ್ದೇವೆ. ಆಹಾರ ಉತ್ಪಾದನೆಯ ಕ್ಷೇತ್ರದಲ್ಲಿ ಜಗತ್ತಿಗೆ ರಫ್ತು ಮಾಡುವ ರಾಷ್ಟ್ರಗಳಲ್ಲಿ ನಾವು ಮುಂಚೂಣಿಯಲ್ಲಿರುವುದು ನಮ್ಮ ಸಾಧನೆಯ ಹಾದಿಯನ್ನು ತೋರಿಸುತ್ತದೆ. ದೇಶದ ಹಿತ ರಕ್ಷಣೆ, ಐಕ್ಯತೆಯ ಭಾವ, ರಾಷ್ಟ್ರಭಕ್ತಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ದೇಶದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಬೇಕು. ವಿದ್ಯಾರ್ಥಿಗಳು ಸಾಧನೆಯ ದಾರಿಯನ್ನು ಹುಡುಕಿಕೊಳ್ಳಬೇಕು. ಕ್ರಿಯಾಶೀಲ ಚಿಂತನೆ, ಹೊಸತನವನ್ನು ಹುಡುಕುವ ಯೋಚನೆ ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.