ಭಟ್ಕಳ: ತಾಲೂಕಿನ ಇತಿಹಾಸ ಪ್ರಸಿದ್ದ ಶಕ್ತಿ ಕ್ಷೇತ್ರವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರಾ ಮಹೋತ್ಸವವೂ ಸೋಮವಾರದಂದು ವಿಜೃಂಭಣೆಯಿಂದ ಆರಂಭವಾಗಿದ್ದು, ಮೊದಲ ದಿನ ಹಾಲಹಬ್ಬದ ಬಳಿಕ 2ನೇ ದಿನವಾದ ಮಂಗಳವಾರದಂದು ಸಂಪ್ರದಾಯದ ಕೆಂಡ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ವರ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ಬಂದ ಭಕ್ತರು ಹರಕೆ ಒಪ್ಪಿಸಿದರು.
ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ ಒಂದಾದ ಸೋಡಿಗದ್ದೆ ಅಮ್ಮನವರ ಭಟ್ಕಳದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯ ಎರಡನೇ ದಿನವಾದ ವಿಶೇಷ ಕೆಂಡ ಸೇವೆಯು ದೇವಾಲಯದ ಆವರಣದಲ್ಲಿ ನಡೆಯಿತು.
ಬೆಳಗ್ಗೆ 11.30 ಗಂಟೆಗೆ ಆರಂಭವಾದ ಕೆಂಡ ಸೇವೆಯಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಚಿಕ್ಕ ಮಕ್ಕಳನ್ನು ತಾಯಿ ಹಾಗೂ ದೇವಾಲಯದ ಕೆಲ ಪೂಜಾರಿಗಳು ಎತ್ತಿಕೊಂಡು ಕೆಂಡ ಹಾಯ್ದರೆ, ವೃದ್ಧರು, ಯುವಕರು, ಯುವತಿಯರು, ಮಹಿಳೆಯರು ಕೆಂಡದ ಮೇಲೆ ನಡೆದು ತಮ್ಮ ಬೇಡಿಕೆಯನ್ನು ಒಪ್ಪಿಸಿದರು. ಜಾತ್ರೆಯಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದು, ಬುಧವಾರ ತುಲಾಭಾರ ಸೇವೆ ನಡೆಯಲಿದೆ.
ಕೋವಿಡ್ ನ ಎರಡು ಅಲೆಗಳಿಂದಾಗಿ ಹರಕೆಯನ್ನು ದೇವಿಗೆ ಒಪ್ಪಿಸಲು ಸಾಧ್ಯವಾಗದವರಿಗೆ ಈ ವರ್ಷ ಯಾವುದೇ ತೊಂದರೆ ತೊಡಕಿಲ್ಲದೇ ಅಧಿಕ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿರುವುದು ಕಂಡು ಬಂತು. ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಶಕ್ತಿ ರಾಜ್ಯದ ಮೂಲೆ ಮೂಲೆಯ ಭಕ್ತರನ್ನು ಆಕರ್ಷಿಸುತ್ತಿದ್ದು, ಜಾತ್ರೆಯ ವೇಳೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣಸಿಗುತ್ತಿದೆ.
ಇನ್ನು ಭಟ್ಕಳದಲ್ಲಿ ಸೇವೆ ಸಲ್ಲಿಸಿದ ಇಲಾಖೆಯ ಕೆಲ ಅಧಿಕಾರಿಗಳು ಸಹ ಅವರ ಮನಸ್ಸಿನ ಇಷ್ಟಾರ್ಥಕ್ಕೆ ಕೆಂಡ ಸೇವೆ ಮಾಡಿರುವದುಂಟು. ಈ ಬಾರಿ ಭಟ್ಕಳ ಕೃಷಿ ಇಲಾಖೆಯ ಅಧಿಕಾರಿಗಳು, ಬೆಳಕೆ ಗ್ರಾಮ ಪಂಚಾಯತ ಪಿಡಿಒ ಅವರು ಕೆಂಡ ಸೇವೆ ಗೈಯ್ದಿರುವುದು ದೇವಿಯ ಶಕ್ತಿಯ ಮೇಲಿಟ್ಟ ನಂಬಿಕೆಗೆ ಉದಾಹರಣೆ ನೀಡಿದಂತಿದೆ. ಈ ವರ್ಷವೂ ಸಹ ಮಹಿಳೆಯರು, ಮಕ್ಕಳ ಸಂಖ್ಯೆಯೇ ಹೆಚ್ಚಿದ್ದು, ದೇವಿಯ ಹರಕೆಯನ್ನು ಕೆಂಡಸೇವೆಯ ಮೂಲಕ ಸಲ್ಲಿಸಿದರು.
ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಸೇವೆ:
ಜಾತ್ರೆಯ ಕೆಂಡ ಸೇವೆಗೆ, ಬರುವಂತಹ ಎಲ್ಲಾ ಭಕ್ತರಿಗೆ ದೇವಸ್ಥಾನದಲ್ಲಿ ಸಾಕಷ್ಟು ಸ್ವಯಂ ಸೇವಕರು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ್ದು, ಭಕ್ತರಿಗಾಗಿ ತಂಪು ಮಜ್ಜಿಗೆ ಸೇವೆಯನ್ನು ಸತತ ಏಳನೇ ವರ್ಷಗಳ ಕಾಲ ಇಲ್ಲಿನ ಸ್ಥಳೀಯ ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆಸಿಕೊಂಡು ಬಂದಿರುವುದು ಈ ವರ್ಷವೂ ಮುಂದುವರೆದಿದೆ.
ಜಾತ್ರೆ ಸಂದರ್ಭದಲ್ಲಿ ಹೂವಿನ ಪೂಜೆ, ಬಂಗಾರದ ತೊಟ್ಟಿಲು ಸಮರ್ಪಣೆ, ಬೆಳ್ಳಿ, ಬಂಗಾರದ ಕಣ್ಣು, ಬಂಗಾರದ ಆಭರಣ ಇತ್ಯಾದಿಗಳನ್ನು ಭಕ್ತಿ ಪೂರ್ವಕವಾಗಿ ದೇವಿಗೆ ಸಮರ್ಪಿಸುವ ಕಾರ್ಯ ಕೂಡಾ ಭಕ್ತರಿಂದ ನಡೆಯುತ್ತದೆ. ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತಿರುವ ಜಾತ್ರೆಯಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಪ್ರತಿ ವರ್ಷದಂತೆ ದಕ್ಷಿಣ ಕನ್ನಡದ ಭಕ್ತರು ಎತ್ತಿನ ಗಾಡಿ ಶೃಂಗರಿಸಿ, ತಮ್ಮ ಬೇಡಿಕೆಯಾಗಿದ್ದ ಹರಕೆ ತೀರಿಸಿದರಲ್ಲದೇ, ಜಾತ್ರೆಗೆ ಸಾಂಪ್ರದಾಯಿಕ ಮೆರುಗು ತಂದರು. ಜಾತ್ರೆಯಲ್ಲಿ ಯಾವುದೇ ಅನಾಹುತವಾಗದಂತೆ ತಡೆಯುವ ಸಲುವಾಗಿ, ದೇವಸ್ಥಾನ ಅಭಿವದ್ಧಿ ಸಮಿತಿ, ಇಲಾಖಾ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಪೊಲೀಸರು ಸುಸಜ್ಜಿತ ವ್ಯವಸ್ಥೆ ಕಲ್ಪಿಸಿದ್ದರು.