ದಾಂಡೇಲಿ: ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ದಾಂಡೇಲಿ ತಾಲೂಕು ಘಟಕ ಪಟ್ಟಣದ ಸಂತೋಷ್ ಹೊಟೆಲ್ ಸಭಾಭವನದಲ್ಲಿ ಜ27 ರಂದು ಶುಕ್ರವಾರ ಸಂಜೆ 5 ಗಂಟೆಗೆ ‘ಹಣತೆ ಬೆಳಕಿನಲ್ಲಿ ಸಾರಾ ಅಬೂಬಕ್ಕರ್’ (ಕಾಳಿ ತೀರದಲ್ಲಿ ‘ಚಂದ್ರಗಿರಿ ತೀರ’ದ ನೆನಪುಗಳು) ಕಾರ್ಯಕ್ರಮ ಹಮ್ಮಿಕೊಂಡಿದೆ.
ಇತ್ತೀಚೆಗೆ ನಿಧನರಾದ ನಾಡಿನ ಹೆಸರಾಂತ ಕಥೆಗಾರ್ತಿ, ‘ಚಂದ್ರಗಿರಿ ತೀರದಲ್ಲಿ’ ಕಾದಂಬರಿಯನ್ನು ಕನ್ನಡಕ್ಕೆ ಕೊಟ್ಟ ಸಾರಾ ಅಬೂಬಕ್ಕರ್ ಅವರನ್ನು ನೆನಪಿಸಿಕೊಳ್ಳಲು ಸಾಹಿತ್ಯಾಸಕ್ತರ ಸಭೆ ಹಮ್ಮಿಕೊಳ್ಳಲಾಗಿದೆ.
ಸಭೆಯನ್ನು ಇಲ್ಲಿಯ ಬಂಗೂರನಗರ ಕಾಲೇಜಿನ ಉಪನ್ಯಾಸಕಿ ಡಾ. ತೃಪ್ತಿ ನಾಯಕ ಉದ್ಘಾಟಸಲಿದ್ದು ಅಧ್ಯಕ್ಷತೆಯನ್ನು ಹಣತೆ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಎನ್. ಜಯಚಂದ್ರನ್ ವಹಿಸುವರು. ಮುಖ್ಯ ಅತಿಥಿಯಾಗಿ ಜನತಾ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರೊ. ಉಪೇಂದ್ರ ಘೋರ್ಪಡೆ ಪಾಲ್ಗೊಳ್ಳಲಿದ್ದಾರೆ. ಹಳೆ ದಾಂಡೇಲಿಯ ಸರಕಾರಿ ಉರ್ದು ಪ್ರೌಢಶಾಲೆಯ ಮುಖ್ಯೋಪಾದ್ಯಾಪಕ ಹಾಗೂ ‘ಹಣತೆ’ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹಣತೆ ದಾಂಡೇಲಿ ಘಟಕದ ಅಧ್ಯಕ್ಷ ರಾಘವೇಂಧ್ರ ಗಡೆಪ್ಪನವರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕನ್ನಡದ ಹಿರಿಯ ಕಥೆಗಾರ್ತಿ ಸಾರಾ ಅಬೂಬಕ್ಕರ್ ಅವರು 1936 ಜೂನ್ 30 ರಂದು ಕೇರಳದ ಕಾಸರಗೋಡಿನ ಚಂದ್ರಗಿರಿ ನದಿ ತೀರದ ಗ್ರಾಮವೊಂದರಲ್ಲಿ ಜನಿಸಿದ್ದರು. ಅರೇಬಿಕ್ ಕಲಿತ ಅವರ ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಕೇಳಿ ಬಾಲ್ಯದ ಆ ದಿನಗಳಲ್ಲಿ ತಾನೂ ಬರೆಯಬೇಕು ಎಂದು ಕೊಂಡ ಸಾರಾ ತಮ್ಮ ನಲವತ್ತನೆಯ ವಯಸ್ಸಿನಲ್ಲಿ ಬರೆಯಲು ಆರಂಭಿಸಿದರು. ಅವರ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಅಪಾರ ಜನಮನ್ನಣೆ ಗಳಿಸಿತ್ತು. ಅನಂತರ ಸಾರಾ ಬರೆದ ಕಾದಂಬರಿಗಳಾದ ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ತಳ ಒಡೆದ ದೋಣಿ, ಪಂಜರ, ಕಥಾ ಸಂಕಲನಗಳಾದ ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ ಮುಂತಾದವುಗಳು ಅವರ ಒಂದೊoದು ಮೈಲುಗಲ್ಲಾಗಿ ದಾಖಲಾದವು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ವರ್ದಮಾನ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ನೂರಾರು ಪ್ರಶಸ್ತಿಗಳು ಸಾರಾ ಅವರ ಮಡಿಲು ಸೇರಿವೆ. ಇಂಥ ಹೆಮ್ಮೆಯ ಬರಹಗಾರ್ತಿಯ ಬಗ್ಗೆ ಮೆಲಕು ಹಾಕಲು ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರೆಲ್ಲ ಬರಬೇಕು ಎಂದು ಹಣತೆ ತಾಲೂಕಾಧ್ಯಕ್ಷ ರಾಘವೇಂದ್ರ ಗಡೆಪ್ಪನವರ್ ಮನವಿ ಮಾಡಿದ್ದಾರೆ.