ಶಿರಸಿ :ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಸಹಕಾರಿ ಸಂಸ್ಥೆಗಳು ಪ್ರಯತ್ನಿಸಬೇಕು. ಉತ್ಪನ್ನಗಳಿಗೆ ಇಲ್ಲೇ ಮಾರುಕಟ್ಟೆ ಒದಗಿಸಲು ಮುಂದಾಗಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಅಜ್ಜೀಬಳ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭವನ್ನು ಹಾಗೂ ಶತಮಾನೋತ್ಸವ ಭವನ ಉದ್ಘಾಟಿಸಿ ನಂತರ ಅಲ್ಲೇ ಸಮೀಪದ ಅಜ್ಜೀಬಳ ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿಯಲ್ಲಿ ಸಮಸ್ಯೆಗಳು ಅನೇಕ ಇವೆ. ಅಡಿಕೆಗೆ ಹೊಸ ರೋಗಗಳು, ಕೂಲಿ ಕೊರತೆಯಿದೆ. ಕಾರಣ ಅದನ್ನು ಬಗೆಹರಿಸಲು ಸಂಘಗಳು ಸಂಶೋಧನೆಯನ್ನೂ ಮಾಡಬೇಕು ಎಂದ ಅವರು, ರೈತರು ಹೈನುಗಾರಿಯಲ್ಲೆ ತೊಡಗಿಕೊಳ್ಳಲು ಹಾಲು ಸೊಸೈಟಿಗಳು ಹಾಲು ಸಂಗ್ರಹಕ್ಕೆ ಮುಂದಾಗಬೇಕು ಎಂದರು. ಹೊಸತನವನ್ನು ಸಂಘಗಳು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೊಸೈಟಿಗಳು ಇವತ್ತಿನ ದಿನದ ಅಗತ್ಯತೆ ಪೂರೈಸಲು ಮುಂದಾಗಬೇಕು. ಹೊಸ ರೀತಿಯ ಪ್ರಯೋಗ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದ ಕಾಗೇರಿ, ಸಹಕಾರಿ ಕ್ಷೇತ್ರದಲ್ಲಿ ಸವಾಲುಗಳು ದೊಡ್ಡದಿದೆ. ಸಮಸ್ಯೆಗಳೂ ಇದೆ. ಆದರೆ ಏನೂ ತೊಂದರೆ ಆಗದಂತೆ ಸರ್ಕಾರಿ ವ್ಯವಸ್ಥೆಯಲ್ಲಿ ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಅದನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಹಿರಿಯರು ಏನು ಕೆಲಸ ಮಾಡಿದ್ದಾರೆ ಎಂಬುದಕ್ಕೆ ಸಹಕಾರಿ ಸಂಘಗಳು ಶತಮಾನೋತ್ಸವ, ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದೇ ಸಾಕ್ಷಿ. ಇದನ್ನು ಅವರು ಕಟ್ಟಿರುವ ಕಾರಣ ನಾವು ಸಂತೋಷ ಜೀವನ ನಡೆಸುವಂತಾಗಿದೆ. ಅವರ ಪರಿಶ್ರಮದ ಫಲವಾಗಿ ಸಹಕಾರಿ ಸಂಘಗಳು ಎತ್ತರಕ್ಕೆ ಬೆಳೆದಿದೆ ಎಂದು ಹಿರಿಯ ಸಹಕಾರಿಗಳನ್ನು ಕಾಗೇರಿ ನೆನೆದರು.
ಯುವಕರು ಹೆಚ್ಚೆಚ್ಚು ಬರುತ್ತಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಸಿಬ್ಬಂದಿಗಳೂ ಯುವಕರಿದ್ದಾರೆ. ಉತ್ತಮ ಮಾರ್ಗದರ್ಶನ ದೊರೆಯುತ್ತಿದೆ. ಆದ ಕಾರಣ ಒಳ್ಳೆಯ ಕೆಲಸ ಮಾಡಲು ಹೆಚ್ಚೆಚ್ಚು ಅವಕಾಶವಿದೆ ಎಂದ ಅವರು, ಸಹಕಾರಿ ಕ್ಷೇತ್ರದಲ್ಲಿರುವ ಯುವಕರ ಜವಾಬ್ದಾರಿ ಹೆಚ್ಚಿದೆ. ಸಂಸ್ಥೆಗಳನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕಾಗಿದೆ. ಅದರಂತೆ ನಮ್ಮ ಡಿಸಿಸಿ ಬ್ಯಾಂಕ್ ಸಹ ಮೇಲ್ಪಂಕ್ತಿಯ ಆಡಳಿತ ನಡೆಸಿಕೊಂಡು ಹೋಗಲಿ ಎಂದು ಆಶಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಘದ ಅಧ್ಯಕ್ಷ ಮಂಜುನಾಥ ಹೆಗಡೆ ಬಿಸ್ಲಕೊಪ್ಪ, ಹಲವು ಏಳು ಬೀಳುಗಳೊಂದಿಗೆ ಸಂಘವು ಶತಮಾನೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಉತ್ತಮವಾಗಿ ಸಂಸ್ಥೆ ನಡೆದುಕೊಂಡು ಬರುತ್ತಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಸಹಕಾರಿ ರಂಗ ಇಂದು ಏಳ್ಗೆಯಲ್ಲಿದೆ. ಆದರೆ ಇಂದು ಸಂಸ್ಥೆಗಳಲ್ಲಿ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದ ನಿಯಮಗಳು ಸಮಸ್ಯೆಯಾಗಿದೆ. ಅದನ್ನು ಬಗೆಹರಿಸಿಕೊಡಲು ಸಭಾಧ್ಯಕ್ಷರೂ ಸೇರಿ ಎಲ್ಲರೂ ಪ್ರಯತ್ನಿಸಬೇಕು ಎಂದರು.
ಇದೇ ವೇಳೆ ನೂರರ ಸಂಭ್ರಮ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಆರ್.ಎಮ್.ಹೆಗಡೆ ಬಾಳೇಸರ, ಶಿರಸಿ ಎಪಿಎಮ್ಸಿ ಅಧ್ಯಕ್ಷ ಪ್ರಶಾಂತ ಗೌಡ್ರು, ತ್ಯಾಗಲಿ ಸೊಸೈಟಿ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತೀಘಟ್ಟ, ಸಹಕಾರಿ ಧುರೀಣ ಭಾಸ್ಕರ ಹೆಗಡೆ ಕಾಗೇರಿ ಮುಂತಾದವರು ಇದ್ದರು. ಕು.ಚೇತನಾ ಹೆಗಡೆ ಪ್ರಾರ್ಥನೆ ಮಾಡಿದರು.
ಖೋಟ್ :
ಸಹಕಾರಿ ಸಂಘಗಳ ಆಡಳಿತಾತ್ಮಕ ತೊಂದರೆಗಳನ್ನು ಸರಿಪಡಿಸಲು ನನ್ನ ಕೈಲಾದ ಸಹಕಾರ ನೀಡುತ್ತೇನೆ
ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ.