Slide
Slide
Slide
previous arrow
next arrow

ದಾಂಡೇಲಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

300x250 AD

ದಾಂಡೇಲಿ: ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಜನ್ಮ ಜಯಂತಿಯನ್ನು ಶನಿವಾರ ಆಚರಿಸಲಾಯಿತು.
ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಆರತಿ ಬೆಳಗಿ, ಪುಷ್ಪಗೌರವವನ್ನು ಸಲ್ಲಿಸಿ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ, 12ನೇ ಶತಮಾನ ಕಂಡ ಸಾವಿರಾರು ಶಿವಶರಣರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದರೂ ಕೂಡ ತನ್ನ ವಿಶಿಷ್ಟ ನಿಲುವಿನಿಂದಾಗಿ ಭಿನ್ನವಾಗಿ ಕಂಗೊಳಿಸುತ್ತಾರೆ. ಬಸವಣ್ಣ, ಅಲ್ಲಮರ ಸಮಸಮಾಜದ ಅಲೆಗಳ ಸೆಳೆತಕ್ಕೆ ಒಳಗಾಗಿ ಅನೇಕ ಕಾಯಕಜೀವಿಗಳಂತೆ ಕಲ್ಯಾಣದ ಅನುಭವ ಮಂಟಪದಲ್ಲಿ ತಾನು ಭಾಗವಹಿಸಿ ಕೃತಾರ್ಥರಾದವರು ಅಂಬಿಗರ ಚೌಡಯ್ಯನವರು. ವಚನಕಾರರಲ್ಲಿಯೇ ಅಂಬಿಗರ ಚೌಡಯ್ಯನವರು ಬಂಡಾಯಗಾರರಾಗಿದ್ದರೂ, ಅವರ ಬಂಡಾಯದ ಹಿಂದೆ ಸಮಾಜವನ್ನು ಸಮಗ್ರವಾಗಿ ಬದಲಾವಣೆ ಮಾಡುವ ಆಶಯವಿತ್ತು, ಸರ್ವೋದಯದ ತುಡಿತವಿತ್ತು. ಶೋಷಣಾಮುಕ್ತ ಸರ್ವ ಸಮಾನತೆಯ ಸಮಾಜ ನಿರ್ಮಾಣದ ಗುರಿಯಿತ್ತು. ಆ ಕಾರಣಕ್ಕಾಗಿಯೆ ಅಂಬಿಗರ ಚೌಡಯ್ಯನವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಅಂಬಿಗರ ಚೌಡಯ್ಯನವರ ಜೀವನಾದರ್ಶಗಳ ಬಗ್ಗೆ ಹಾಗೂ ಅವರ ಸಾಹಿತ್ಯವನ್ನು ಓದಿ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರು, ಚಿಂತಕರು, ವಾಗ್ಮಿಗಳು ಮತ್ತು ದಾಂಡೇಲಿಯ ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ಅಧ್ಯಕ್ಷರಾದ ಪ್ರೊ.ಎಸ್.ಎಂ ಕಾಚಾಪುರ ಅವರನ್ನು ತಾಲ್ಲೂಕಾಡಳಿತದ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಪ್ರೊ.ಎಸ್.ಎಂ. ಕಾಚಾಪುರ, ಹುಟ್ಟಿದ ಪ್ರತಿಯೊಬ್ಬನಿಗೂ ಒಂದಲ್ಲ ಒಂದು ದಿನ ಸಾವು ಬರುತ್ತದೆ. ಆದರೆ ಸಾವಿನ ನಂತರವೂ ಬದುಕುಳಿಯುವವರು ಕೆಲವೆ ಕೆಲವು ಜನರು ಮಾತ್ರ. ಅಂತಹ ಕೆಲವರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಸಹ ಒಬ್ಬರು. ಸಮಾಜದ ಅಭ್ಯುದಯಕ್ಕಾಗಿ ಮತ್ತು ಸಮಾನತೆ, ಭಾತೃತ್ವದ ಸಮಾಜದ ನಿರ್ಮಾಣದ ಕನಸನ್ನಿಟ್ಟು ಅದಕ್ಕಾಗಿ ತಮ್ಮ ಜೀವನವನ್ನು ಸಮರ್ಪಣಾಭಾವದಿಂದ ಸಮರ್ಪಿಸಿಕೊಂಡವರು ಅಂಬಿಗರ ಚೌಡಯ್ಯನವರಾಗಿದ್ದರು. ಅಂಬಿಗರ ಚೌಡಯ್ಯನವರ ಸರ್ವಸಮಾನತೆಯ ತತ್ವಾದರ್ಶಗಳನ್ನು ನಾವು ನೀವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ರಾಘವೇಂದ್ರ ಪೂಜೇರಿ, ತಹಶೀಲ್ದಾರ್ ಕಚೇರಿಯ ಗೋಪಿ ಚೌವ್ಹಾಣ್, ದೀಪಾಲಿ ಪೆಡ್ನೇಕರ್, ನಗರದ ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ಪ್ರಮುಖರುಗಳಾದ ನಗರ ಸಭಾ ಸದಸ್ಯ ಮಹಾದೇವ ಜಮಾದಾರ, ವಿನಾಯಕ ಬಾರೀಕ್ಕರ್, ರವಿ ಪೈ, ಜಗದೀಶ ತಳವಾರ್, ಸುರೇಶ್ ಹಂಪಯ್ಯ, ಶಿವಪ್ಪ ನಾಗರಾಳ, ರಾಘವೇಂದ್ರ ಕೋಳಿ, ಹನುಮಂತ ಕೋಳಿ ಹಾಗೂ ಸಂಘದ ಪ್ರಮುಖರು, ಸದಸ್ಯರು ಮತ್ತು ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಇದ್ದರು.

300x250 AD
Share This
300x250 AD
300x250 AD
300x250 AD
Back to top