ಕುಮಟಾ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕಲಬುರಗಿಯ ಖಣದಾಳ ಶ್ರೀಗುರು ವಿದ್ಯಾಪೀಠ ವಸತಿ ಶಾಲೆಯಲ್ಲಿ ನಡೆದ 30ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶ- 2022ರ ಉಪವಿಷಯದಲ್ಲಿ ಕಾಲಿನಿಂದ ಒತ್ತುವ ನಲ್ಲಿ ಎನ್ನುವ ಯೋಜನೆಯನ್ನು ಉತ್ತಮವಾಗಿ ಮಂಡಿಸಿ ಗ್ರಾಮೀಣ ಹಿರಿಯರ ವಿಭಾಗದಲ್ಲಿ ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿ ಸಾನಿಕಾ ನಾಯ್ಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟ್ರ ಮಟ್ಟದ ಕಾರ್ಯಕ್ರಮ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿದೆ.
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ಉತ್ತಮ ಪ್ರಯೋಗಾಲಯ, ಪ್ರೊಜೆಕ್ಟರ್ ವ್ಯವಸ್ಥೆ, ನುರಿತ ಶಿಕ್ಷಕ ವೃಂದವಿದೆ. ವಿಶಾಲವಾದ ಕ್ರೀಡಾಂಗಣ, ಗ್ರಂಥಾಲಯ ವ್ಯವಸ್ಥೆ, ಕಂಪ್ಯೂಟರ್ ಕೊಠಡಿ ಇದ್ದು, ವಿದ್ಯಾರ್ಥಿಗಳಿಗೆ ಪೂರಕವಾಗಿದೆ. ಪ್ರತಿವರ್ಷವೂ ಮಹಾದೇವ ಬಿ.ಗೌಡ ಇವರ ಮಾರ್ಗದರ್ಶನದಲ್ಲಿ ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ವಿಶೇಷವಾಗಿದೆ. ಈ ಹಿಂದೆಯೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಯುವವಿಜ್ಞಾನಿ, ಇನ್‌ಸ್ಪೈರ್ ಅವಾರ್ಡ್, ವಿಜ್ಞಾನ ವಸ್ತುಪ್ರದರ್ಶನ, ವಿಜ್ಞಾನ ವಿಚಾರಗೋಷ್ಟಿ, ರಾಷ್ಟ್ರಮಟ್ಟದ ಲೇಕ್-2022 ಕಾರ್ಯಕ್ರಮ, ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮತ್ತು ಮಾರ್ಗದರ್ಶಕ ಶಿಕ್ಷಕರಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಹೊನ್ನಪ್ಪ ಎನ್.ನಾಯಕ ಮತ್ತು ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧ್ಯಾಪಕ ರೋಹಿದಾಸ ಎಸ್.ಗಾಂವಕರ, ಶಿಕ್ಷಕ ವೃಂದದವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಈಶ್ವರ ನಾಯ್ಕ, ಡಯಟ್ ಪ್ರಾಂಶುಪಾಲ ಎನ್.ಜಿ.ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ್, ಶ್ರೀಬ್ರಹ್ಮಜಟಕ ಯುವಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಹಿರೇಗುತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗರತ್ನ ಗಾಂವಕರ, ಉಪಾಧ್ಯಕ್ಷ ಶಾಂತಾ ನಾಯಕ ಹಾಗೂ ಸದಸ್ಯರು, ಊರಿನ ನಾಗರಿಕರು ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.