ಸಿದ್ದಾಪುರ : ಕ್ರೀಡೆ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಸದೃಢಗೊಳಿಸುತ್ತದೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಆರೋಗ್ಯ ಕಾಯ್ದುಕೊಳ್ಳಿ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ಅವರು ತಾಲೂಕಿನ ಅವರಗುಪ್ಪ ಶ್ರೀ ವೀರಭದ್ರೇಶ್ವರ ಕಬಡ್ಡಿ ಕ್ಲಬ್ ಹಾಗೂ ಊರ ನಾಗರಿಕರ ಸಹಕಾರದೊಂದಿಗೆ ಶ್ರೀ ಮಾರಿಕಾಂಬಾ ಕ್ರೀಡಾಂಗಣ ಅವರಗುಪ್ಪದಲ್ಲಿ ಆಯೋಜಿಸಲಾದ ಹೊನಲು ಬೆಳಕಿನ ಮ್ಯಾಟ್ ಮಾದರಿಯ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಕಬಡ್ಡಿಯಂತಹ ಆಟಗಳು ಯುವಕರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತವೆ. ಕಬಡ್ಡಿ ಎಲ್ಲರಿಗೂ ಇಷ್ಟವಾಗುವ ಕ್ರೀಡೆ. ಯುವಕರಿಗೆ ಪ್ರದರ್ಶನ ನೀಡಲು ವೇದಿಕೆಯನ್ನು ನೀಡಲಾಗಿದೆ ಇದರಿಂದ ಅವರು ಮುಂದಿನ ಹೆಜ್ಜೆಯನ್ನು ದೊಡ್ಡ ಹಂತಕ್ಕೆ ಕೊಂಡೊಯ್ಯಬಹುದು.ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಯು ನಶಿಸಿ ಹೋಗಿದೆ. ಪುನಃಶ್ಚೇತನ ಮಾಡಲಿಕ್ಕೆ ಗ್ರಾಮೀಣ ಯುವಕರು ಕಬಡ್ಡಿ ಪಂದ್ಯಾವಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿದ್ದಾರೆ. ಕ್ರೀಡೆಯು ದೈಹಿಕವಾಗಿ, ಮಾನಸಿಕವಾಗಿ ದೇಹದ ಆರೋಗ್ಯದ ಬಗ್ಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೋಸ್ಕರವಾಗಿ ಕ್ರೀಡೆಯನ್ನು ನಡೆಸಬೇಕೆಂದು ಯುವಕರಿಗೆ ಕರೆ ನೀಡಿದರು.ಕ್ರೀಡೆಯಲ್ಲಿ ಸೋಲು ಗೆಲುವು ಇರುವದು ಸಹಜ ಸೋತವರು ನಮ್ಮವರೇ, ಗೆದ್ದವರು ನಮ್ಮವರೇ ಎಲ್ಲರನ್ನೂ ಸಮನಾಗಿ ಕಾಣಬೇಕೆಂದು ಗ್ರಾಮೀಣ ಪ್ರದೇಶದ ಯುವಕರಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಮಹಾಬಲೇಶ್ವರ ಆರ್ ನಾಯ್ಕ ವಹಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀದರ ವೈದ್ಯ, ದಿವಾಕರ್ ನಾಯ್ಕ ಹೆಮ್ಮನಬೈಲ,ಲಕ್ಷ್ಮಣ್ ನಾಯ್ಕ, ಕೆ ಆರ್ ವಿನಾಯಕ, ಸುಧಾಕರ ಜಿ ನಾಯ್ಕ, ರಾಜು ಗೊಂಡ ಹಾಗೂ ಅಪಾರ ಸಂಖ್ಯೆಯಲ್ಲಿ ಕ್ರೀಡಾ ಅಭಿಮಾನಿಗಳು, ಊರಿನ ಹಿರಿಯರು ಹಾಗೂ ಕ್ರೀಡಾ ಪಟ್ಟುಗಳು ಉಪಸ್ಥಿತರಿದ್ದರು