ಕುಮಟಾ: ಶತಮಾನ ಪೂರೈಸಿದ ತಾಲೂಕಿನ ಹೆಗಡೆಯ ಹೆಣ್ಣು ಮಕ್ಕಳ ಶಾಲೆಗೆ ಅಗತ್ಯವಾದ ಶೌಚಾಲಯ ನಿರ್ಮಾಣಕ್ಕಾಗಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ 3 ಲಕ್ಷ ರೂ. ಅನುದಾನ ಒದಗಿಸುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆದಿದೆ.
ತಾಲೂಕಿನ ಹೆಗಡೆಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಧಾರವಾಡದ ಜನರಲ್ ಮ್ಯಾನೇಜರ್ ಸತೀಶ್ ಆರ್ ಅವರು ಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲು ಬ್ಯಾಂಕ್ ವತಿಯಿಂದ ನೀಡಲಾದ 3 ಲಕ್ಷ ರೂ ಚೆಕ್‌ನ್ನು ಶಾಲಾ ಮುಖ್ಯಾಧ್ಯಾಪಕರಿಗೆ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು, ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಇರುತ್ತದೆ. ಆರೋಗ್ಯವಿದ್ದರೆ ನಾವು ಮಾನಸಿಕವಾಗಿ ಸದೃಢರಾಗಿರುತ್ತೇವೆ. ಹಾಗಾಗಿ ಪ್ರತಿಯೊಬ್ಬರೂ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ನೀಡಬೇಕು. ಹೆಗಡೆಯ ಹೆಣ್ಣು ಮಕ್ಕಳ ಶಾಲೆಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಶೌಚಾಲಯಕ್ಕೆಂದು ತಮ್ಮ ಬ್ಯಾಂಕ್ ನಿಂದ ಮೂರು ಲಕ್ಷ ಅನುದಾನ ಒದಗಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯ ಪರಿಸರ ತುಂಬಾ ಚೆನ್ನಾಗಿದೆ. ಇದನ್ನು ನಾವು ತಮ್ಮ ತಂಡದೊoದಿಗೆ ಸಮೀಕ್ಷೆ ಮಾಡಿ ಇಡೀ ಜಿಲ್ಲೆಯಲ್ಲಿ ಈ ಶಾಲೆ ಆಯ್ಕೆಯಾಗಿದ್ದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
ಬ್ಯಾಂಕ್’ನ ಪ್ರಧಾನ ಕಚೇರಿಯ ಮುಖ್ಯ ಮ್ಯಾನೇಜರ್ ಉಲ್ಲಾಸ್ ಗುನಗ ಮತ್ತು ಪ್ರಾದೇಶಿಕ ಕಚೇರಿಯ ಮ್ಯಾನೇಜರ್ ಜಿ.ಪಿ. ಭಟ್ ಮಾತನಾಡಿ, ಮಕ್ಕಳನ್ನು ನೋಡುತ್ತಿದ್ದರೆ ನಮಗೆ ನಮ್ಮ ವಿದ್ಯಾರ್ಥಿಯ ಜೀವನ ನೆನಪಾಗುತ್ತದೆ. ನಾವು ಕೂಡ ಸರ್ಕಾರಿ ಶಾಲೆಯಲ್ಲಿ ಓದಿ ಇಂದು ಈ ಹಂತಕ್ಕೆ ತಲುಪಿದ್ದೇವೆ. ವಿದ್ಯಾರ್ಥಿಗಳು ಕೂಡ ಭವಿಷ್ಯದಲ್ಲಿ ಚೆನ್ನಾಗಿ ಓದಿ ಆದರೆ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ನೀಡಿ ಎನ್ನುತ್ತಾ ಭವಿಷ್ಯದಲ್ಲಿ ಉನ್ನತ ಶಿಕ್ಷಣ ಮಾಡಲು ತೊಂದರೆಯಾದರೆ ನಮ್ಮ ಬ್ಯಾಂಕಿಗೆ ಬನ್ನಿ ಎಂದು ಕಿವಿಮಾತು ಹೇಳಿದರು.
ಐಕ್ಯ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿ, ತಮ್ಮ ಸಂಸ್ಥೆ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ನೀಡುತ್ತಿದೆ. ಈಗಾಗಲೇ ಪುರಸಭಾ ವ್ಯಾಪ್ತಿಯಲ್ಲಿ ಹಲವು ಶಾಲೆಗಳಿಗೆ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಕೆ.ವಿ.ಜಿ ಬ್ಯಾಂಕ್ ನವರು ಸ್ವಚ್ಛತೆ ನಮ್ಮ ಆದ್ಯತೆ ಯೋಜನೆ ಅಡಿ ಈ ಶಾಲೆಗೆ ಅನುದಾನ ನೀಡುವುದರ ಮೂಲಕ ವಿಶೇಷವಾಗಿ ಮಕ್ಕಳ ಬಗ್ಗೆ ಅತ್ಯಂತ ಕಾಳಜಿ ವಹಿಸಿದೆ ಎಂಬುದು ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ಶೌಚಾಲಯದ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ನಾಯ್ಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಕೌಂಟ್ ಮ್ಯಾನೇಜರ್ ಸುಧಾ ಕಡೆಕೋಡಿ, ಮುಖ್ಯಾಧ್ಯಾಪಕಿ ಮಂಗಲ ಹೆಬ್ಬಾರ್, ಶಿಕ್ಷಕ ಶ್ರೀಧರ್ ಗೌಡ , ದೈಹಿಕ ಶಿಕ್ಷಕಿ ಶಾಮಲಾ ಪಟಗಾರ, ಎಸ್‌ಡಿಎಮ್‌ಸಿ ಸದಸ್ಯರುಗಳಾದ ನಾರಾಯಣ ಕಿಣಿ, ರಾಧಾ ನಾಯ್ಕ, ಗಂಗೂ ಮುಕ್ರಿ, ವಾಸಂತಿ ನಾಯ್ಕ, ಗೀತಾ ನಾಯ್ಕ ಇತರರು ಇದ್ದರು.