ಹೊನ್ನಾವರ: ಬಿಜೆಪಿಗರು 1993ರಲ್ಲಿ ಭಟ್ಕಳ ಗಲಾಟೆ ಮಾಡಿ ನೂರಾರು ಮಂದಿ ಸಾವಿಗೆ ಕಾರಣರಾದರು. ಶಾಸಕ ಚಿತ್ತರಂಜನ, ತಿಮ್ಮಪ್ಪ ನಾಯ್ಕ, ಈಗ ಪರೇಶ್ ಮೇಸ್ತ ಕೊಲೆ ಮಾಡಿದರು. ಈಗ ಚುನಾವಣೆ ಹತ್ತಿರ ಬಂತು, ಮತ್ತೆ ಯಾರ ಕೊಲೆಗೆ ಕಾಯುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಮಾಜಿ ಶಾಸಕ ಮಂಕಾಳ್ ವೈದ್ಯ ಹೇಳಿದರು.
ಅವರು ತಾಲೂಕಿನ ಮುಗ್ವಾ ಗ್ರಾಮ ಪಂಚಾಯತಿ ವ್ಯಾಪ್ತಿಯ ನಗರೆಯ ನಂ.1 ಮತ್ತು ಕುಳಕೋಡ, ಆರೋಳ್ಳಿ ಮುಂಡಗೋಡ ಬೂತ್ ಮಟ್ಟದ ಕಾಂಗ್ರೆಸ್ ಪಕ್ಷದ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಚಿತ್ತರಂಜನ, ತಿಮ್ಮಪ್ಪ ನಾಯ್ಕ, ಪರೇಶ್ ಮೇಸ್ತನದ್ದು ಇವರು ಕೊಲೆ ಮಾಡಿಲ್ಲ ಎಂದಾದರೆ ಯಾಕೆ ಆರೋಪಿಯನ್ನು ಹಿಡಿಯುತ್ತಿಲ್ಲ? ಪರೇಶ್ ಮೇಸ್ತ ಕೊಲೆ ಎಂದು ಇವರೇ ಹೇಳಿದರು, ಈಗ ಇವರೇ ಸಹಜ ಸಾವು ಹೇಳುತ್ತಿದ್ದಾರೆ. ಬಿಜೆಪಿಯವರು ಇತಿಹಾಸದಲ್ಲಿ ಕೆಲಸ ಮಾಡಿ ಗೆದ್ದಿಲ್ಲ, ಸುಳ್ಳು ವದಂತಿ ಹಬ್ಬಿಸಿ ಚುನಾವಣೆ ಮಾಡುವುದೇ ಅವರ ಕೆಲಸವಾಗಿದೆ ಎಂದರು.
ರಾಜಕೀಯಕ್ಕೆ ಬಂದು 17 ವರ್ಷ ಕಳೆದಿದೆ. ನೀವು ಶಾಸಕನನ್ನಾಗಿ ಮಾಡಿ 5 ವರ್ಷ ಕೆಲಸ ಮಾಡಿದ್ದೇನೆ. ಮತ್ತೆ 5 ವರ್ಷ ಕೈಲಾದ ಕೆಲಸ ಸಹಾಯ ಸಹಕಾರ ಮಾಡಿದ್ದೇನೆ. ಕಳೆದ 10 ವರ್ಷದಿಂದ ನಿರಂತರವಾಗಿ ಜನರ ನಡುವೆ ಇದ್ದೇನೆ. ಕೆಲಸ ಮಾಡಿ ಗುರುತಿಸಿಕೊಳ್ಳಬೇಕು ಎನ್ನುವುದು ಬಿಟ್ಟರೆ ಇಂತಹ ಮಾರ್ಗದಲ್ಲಿ ರಾಜಕೀಯ ಮಾಡಬಾರದು. ಕಾಂಗ್ರೆಸ್ ಕೆಳವರ್ಗದ ಜನರಿಗೆ, ಬಡವರಿಗೆ ಉಪಯುಕ್ತವಾಗುವ ಯೋಜನೆ ತರುತ್ತಿದೆ. ನೀವು ಕಟ್ಟಿದ ಟ್ಯಾಕ್ಸ್ನಿಂದಲೇ ನಿಮಗೆ ಕೊಡುತ್ತಿದೆ. ಈಗಿನ ಸರಕಾರದಲ್ಲಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೆದರಿಸುವ, ಬೆದರಿಸುವ ಕೆಲಸ ನಡೆಯುತ್ತೆ ಯಾರು ಹೆದರುವುದು ಬೇಡ ನಿಮ್ಮ ಜೊತೆ ನಾನಿದ್ದೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಕಾಂಗ್ರೆಸ್ ಪಕ್ಷ ಜನಪರ ಕೆಲಸ ಮಾಡುತ್ತಿದೆ. ಮಂಕಾಳ್ ವೈದ್ಯರು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಪಕ್ಷದ ಸಿದ್ಧಾಂತದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಕಡೆಯಲ್ಲು ಕಾಂಗ್ರೆಸ್ ಪಕ್ಷಕ್ಕೆ ಯುವಕರು ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಯಕ್ಷಗಾನ ಕಲಾವಿದ ಗಣಪತಿ ಹೆಗಡೆ ತೋಟಿಮನೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದ ಹಲವಾರು ಯುವಕರು, ಹಿರಿಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆಯ್.ವಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಮುಖಂಡ ಚಂದ್ರಶೇಖರ ಗೌಡ, ಮಾಜಿ ಜಿ.ಪಂ. ಸದಸ್ಯರಾದ ಕೃಷ್ಣ ಗೌಡ, ಪುಷ್ಪಾ ನಾಯ್ಕ, ಗ್ರಾ.ಪಂ. ಅಧ್ಯಕ್ಷೆ ಗೌರಿ ಅಂಬಿಗ, ಮಂಕಿ ಬ್ಲಾಕ್ ಮಹಿಳಾ ಅಧ್ಯಕ್ಷೆ ಉಷಾ ನಾಯ್ಕ, ಹಿರಿಯ ಮುಖಂಡ ನಾರಾಯಣ ನಾಯ್ಕ, ಕಾಂಗ್ರೆಸ್ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಕೃಷ್ಣ ನಾಯ್ಕ ಮಾರಿಮನೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ನಗರೆ ಬೂತ್‌ನ ನೂರಾರು ಕಾರ್ಯಕರ್ತರು ಹಾಜರಿದ್ದರು.