Slide
Slide
Slide
previous arrow
next arrow

ಕುಷ್ಟರೋಗ – ಭಯಬೇಡ ಜಾಗೃತಿ ಇರಲಿ 

300x250 AD

ಆರೋಗ್ಯ ಮಾಹಿತಿ: ಕುಷ್ಟರೋಗ ದಿನವನ್ನು ಜಗತ್ತಿನಾದಂತ ಜನವರಿ ತಿಂಗಳ ಕೊನೆಯ ಭಾನುವಾರ ಅಥವಾ ಜನವರಿ 30ರಂದು ಆಚರಿಸುತ್ತೇವೆ. ಕುಷ್ಟರೋಗದ ಅರಿವನ್ನು ಜನರಿಗೆ ಮೂಡಿಸೋದೇ ಈ ದಿನದ ಮುಖ್ಯ ಉದ್ದೇಶವಾಗಿದೆ. Raoul Follereau ಎಂಬ ಫ್ರೆಂಚ್ ಮಾನವತಾವಾದಿ ಜನವರಿ 30 ವಿಶ್ವ ಕುಷ್ಟ ರೋಗ ದಿನ ಎಂದು ಆಯ್ಕೆ ಮಾಡಿದರು. ಈ ದಿನವು ಮಹಾತ್ಮ ಗಾಂಧೀಜಿಯವರ ಮರಣ ದಿನವೂ ಆಗಿದ್ದು, ಅವರು ಕುಷ್ಟ ರೋಗಿಗಳಿಗೆ ತೋರಿಸುತ್ತಿದ್ದ ಸಹಾನುಭೂತಿ ಮತ್ತು ಆರೈಕೆಗಳನ್ನು ಪರಿಗಣಿಸಿ ಜನವರಿ 30 ರಂದು ಕುಷ್ಟ ರೋಗ ದಿನವನ್ನಾಗಿ ಆಚರಿಸುತ್ತೇವೆ. ಕುಷ್ಟ ರೋಗವು ಒಂದು ನಿಧಾನವಾಗಿ ಬೆಳೆಯುವಂತಹ ಬ್ಯಾಕ್ಟೀರಿಯಾದ  ಮೈಕ್ರೋ ಬ್ಯಾಕ್ಟೇರಿಯಂ ಲೆ ಪ್ರೇ (Mycobacterium leprae)ಇಂದ ಹರಡುತ್ತದೆ. ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದರೂ ಕೂಡ ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುವುದಿಲ್ಲ. ಈ ಕಾಯಿಲೆ ಲಕ್ಷಣಗಳು ಒಬ್ಬ ವ್ಯಕ್ತಿಯಲ್ಲಿ ಕಂಡು ಬರಲು ವರ್ಷಗಳೇ ಬೇಕಾಗುತ್ತದೆ. ಸರಿಯಾದ ಸಮಯದಲ್ಲಿ, ಸೂಕ್ತವಾದ ಔಷಧಿಗಳಿಂದ ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಕುಷ್ಟ ರೋಗಿಗೆ ಸಮಾಜದಲ್ಲಿ ಅದೆಷ್ಟೋ ನಿರ್ಬಂಧಗಳಿವೆ ಮತ್ತು ಕುಷ್ಟರೋಗವೆಂದರೆ ಅದು ಈ ಜನ್ಮದ ಶಾಪವೆಂದು ಅನೇಕರು ಪರಿಗಣಿಸಿದ್ದಾರೆ. ಈ ಎಲ್ಲ ಮೂಢನಂಬಿಕೆಗಳನ್ನು ಮತ್ತು ತಾರತಮ್ಯಗಳನ್ನು ದೂರ ಮಾಡಬೇಕೆಂದರೆ ಕುಷ್ಟರೋಗದ ಬಗ್ಗೆ ಸಂಪೂರ್ಣವಾದ ಜ್ಞಾನ ಅತಿ ಅಗತ್ಯ. ಬನ್ನಿಈ ರೋಗದ ಲಕ್ಷಣಗಳು, ಹರಡುವ ವಿಧಾನ , ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳೋಣ.

 ಕುಷ್ಟರೋಗ ಹರಡುವಿಕೆ ಹಾಗು ಲಕ್ಷಣಗಳು :

ಉಳಿದ ಸಾಂಕ್ರಾಮಿಕ ರೋಗದ ಹಾಗೆ ಕುಷ್ಟರೋಗವು ಕೂಡ ರೋಗಿಯು ಕೆಮ್ಮಿದಾಗ ಸೀನಿದಾಗ ಮತ್ತು ಅತಿ ನಿಕಟವಾದ ಸಂಪರ್ಕದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕುಷ್ಟರೋಗದ ಬ್ಯಾಕ್ಟೀರಿಯಾದ ಮೈಕ್ರೋ ಬ್ಯಾಕ್ಟೇರಿಯಂ ಲೆಪ್ರೆ ಮುಖ್ಯವಾಗಿ ನರಗಳ ಮೇಲೆ ದಾಳಿ ಮಾಡುತ್ತದೆ. ನರಗಳು ಊತುಕೊಂಡು ನರಗಳ ಮೇಲಿರುವ ಚರ್ಮದ  ಸ್ಪರ್ಶಜ್ಞಾನ ಕಡಿಮೆ ಯಾಗುತ್ತದೆ ಇಲ್ಲ ಸ್ಪರ್ಶಜ್ಞಾನ ಸಂಪೂರ್ಣವಾಗಿ ಇಲ್ಲದಿರುವುದು, ಇದರಿಂದ ಚರ್ಮವು ಪದೇ ಪದೇ ಗಾಯಗಳಿಗೆ ತುತ್ತಾಗುವದು .ಚರ್ಮದ ಬಣ್ಣದಲ್ಲಿ ಬದಲಾವಣೆಯನ್ನು ಕಾಣಬಹುದು ಉದಾಹರಣೆ ತಿಳಿಯಾದ ಬಣ್ಣ ಇಲ್ಲ ಗಾಢವಾದ ಬಣ್ಣ ಕಾಣಬಹುದು/ಚರ್ಮ ಒಣ ಅಥವಾ ಚಕ್ಕೆ ಅಂತೆ ಕಾಣಬಹುದು. ಚರ್ಮದಲ್ಲಿ ಈ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರುಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳದೆ ಇದ್ದರೆ ಈ ಕಾಯಿಲೆಯು ಮುಂದುವರೆದು ನರಗಳಿಗೆ ಸಂಪೂರ್ಣ ಹಾನಿಯನ್ನು ಉಂಟು ಮಾಡಿ ಕೈ ಅಥವಾ ಕಾಲುಗಳಿಗೆ ಪಾರ್ಶು ವಾಯುವನ್ನು ಉಂಟು ಮಾಡಬಹುದು,  ಕಾಲಿನ ಬೆರಳುಗಳು ಮರು ಹೀರಿಕೆಯಾಗಬಹುದು, ಬೆರಳುಗಳು ನಷ್ಟವಾಗಬಹುದು, ಹುಬ್ಬುಗಳ ಕೂದಲು ಉದುರಬಹುದು,ಮೂಗಿನ ಮಧ್ಯ ಭಾಗ ಹಾನಿಯಾಗುವದರಿಂದ ತಡಿ ಮೂಗು ವಿರುಪತೆ ಹೊಂದುವದು, ಕಣ್ಣಿನ ನರಗಳಿಗೆ ಹರಡಿದರೆ ಕುರುಡುತನ ಕೂಡ ಉಂಟಾಗಬಹುದು.

ಸಕಾಲದಲ್ಲಿ ರೋಗಿಗಳು ರೋಗ ನಿರ್ಣಯ ಹಾಗೂ ಚಿಕಿತ್ಸೆಯನ್ನು ಪಡೆಯುವುದರಿಂದ ಅಂಗವಿಕಲ, ಅಂಗ ವೈಫಲ್ಯವನ್ನು ತಡೆಯಬಹುದು ಹಾಗೂ ಕುಷ್ಟರೋಗಿಗಳು ತಮ್ಮ ದೈನಂದಿನ ಕೆಲಸ ಕಾರ್ಯ ಮಾಡುತ್ತಾ ಸಕ್ರಿಯ ಜೀವನ ನಡೆಸಬಹುದು.

ಕುಷ್ಟರೋಗದ ಹೊರೆ :

2019ರಲ್ಲಿ ವಿಶ್ವದಾದ್ಯಂತ ಹೊಸ ಕುಷ್ಠ ರೋಗಿಗಳ ಸಂಖ್ಯೆ 2 ಲಕ್ಷ ಆಗಿತ್ತು. ಅದರಲ್ಲಿ ಸುಮಾರು 15 ಸಾವಿರ ಮಕ್ಕಳು ಇದ್ದಾರೆ. ದಿನಕ್ಕೆ 40 ರೋಗಿಗಿಂತಲೂ ಹೆಚ್ಚು ಜನ ಕುಷ್ಟರೋಗಕ್ಕೆ ಒಳಗಾಗಿದ್ದಾರೆ. ಅಂದಾಜು ವಿಶ್ವದಾದ್ಯಂತ 2 ರಿಂದ 3 ಮಿಲಿಯನ್ ಜನರು ಕುಷ್ಟರೋಗದ ಅಂಗವೈಕಲ್ಯದೊಂದಿಗೆ ಜೀವನ ನಡೆಸುತ್ತಿದ್ದಾರೆ. 2019ರಲ್ಲಿ ಕುಷ್ಟರೋಗವು ಭಾರತ ಬ್ರೆಜಿಲ್ ಮತ್ತು ಇಂಡೋನೇಷ್ಯಾ ದೇಶಗಳಲ್ಲಿ ಹೆಚ್ಚಾಗಿ ಗುರುತಿಸಲ್ಪಟ್ಟಿತು. ಒಟ್ಟಾರೆ ಅರ್ಧದಷ್ಟು ಹೊಸ ಕುಷ್ಠ ರೋಗಿಗಳು ಭಾರತದಲ್ಲಿ ಪತ್ತೆಯಾಗುತ್ತಾರೆ.

ಕುಷ್ಟರೋಗದ ಸವಾಲುಗಳು : ಮುಖ್ಯವಾಗಿ ಕುಷ್ಟರೋಗ ಬಡ ದೇಶಗಳಲ್ಲಿ ಹೆಚ್ಚು ಅದರಲ್ಲೂ ಕಿಕ್ಕಿರುದು ತುಂಬಿದ ಬಡವರಲ್ಲಿ ಕುಷ್ಟರೋಗ ಹರಡುವ ಸಾಧ್ಯತೆ ಹೆಚ್ಚು. ಬಹಳಷ್ಟು ಜನರಿಗೆ ಆರೋಗ್ಯ ಸೇವೆ ಸಿಗದೇ ಇರುವುದು ,ವೈದ್ಯರಿಗೆ ಭೇಟಿಯಾಗಲು ತಗಲುವ ಖರ್ಚು, ಹತ್ತಿರದಲ್ಲಿ ತಜ್ಞ ವೈದ್ಯರಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ.ಹಾಗಾಗಿ ಬಹಳ ಕುಷ್ಟ ರೋಗಿಗಳು ಚಿಕಿತ್ಸೆ ತೆಗೆದುಕೊಳ್ಳುವುದಿಲ್ಲ ಅಥವಾ ಚಿಕಿತ್ಸೆ ಪೂರ್ಣಗೊಳಿಸುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಉಚಿತ ಚಿಕಿತ್ಸೆ ಕೊಡುತ್ತಿದ್ದರೂ ,ಬಹಳಷ್ಟು ರೋಗಿಗಳು ಅದರ ಸದುಪಯೋಗ ಪಡೆಯದಿರುವುದು ನಮ್ಮ ದೇಶದಲ್ಲಿ ಕುಷ್ಟರೋಗ ನಿವಾರಣೆಗೆ ದೊಡ್ಡ ಸವಾಲಾಗಿದೆ. ಕುಷ್ಟರೋಗ ಎಂದರೆ ಕಳಂಕ ಎಂಬ ಭಾವನೆ ಜನರಲ್ಲಿ ಕೂತಿರುವುದರಿಂದ ರೋಗಿಯು ಚಿಕಿತ್ಸೆಗೆ ಮುಂಬರದೆ ಕಾಲವ್ಯಯ ಮಾಡಿ ರೋಗ ಕಂಡು ಹಿಡಿಯಲು ಬಹಳ ಸಮಯವಾಗುತ್ತಿದೆ. ಹಾಗೂ ಕುಷ್ಟರೋಗದ ಅಂಗವಕಲ್ಯಕ್ಕೆ ಒಳಗಾಗುತ್ತಿದ್ದಾರೆ , ಇದರಿಂದ ಕೆಲಸವು ಸಿಗದೇ ಮನೆಯಲ್ಲಿ ಕೂರುವಂತಾಗಿದೆ. ಕುಷ್ಟರೋಗ ಬಂದ ಹೆಣ್ಣು ಮಕ್ಕಳು ಲಿಂಗ ತಾರತಮ್ಯದಿಂದ ಹೆಚ್ಚಾಗಿ ಬಳಲುತ್ತಿದ್ದಾರೆ. ಕೆಲವು ದೇಶಗಳಲ್ಲಿ ಕುಷ್ಠ ರೋಗ ಬಂದ ಹೆಣ್ಣು ಮಕ್ಕಳನ್ನು ವಿಚ್ಛೇದಿಸುವ ಕಾನೂನು ಜಾರಿಯಲ್ಲಿದೆ. ದುರಾದೃಷ್ಟವಶಾತ್ ಇದು ಹೆಣ್ಣು ಮಕ್ಕಳನ್ನು ನಿರ್ಗತಿಕ, ನಿರಾಶ್ರಿತರನ್ನಾಗಿ ಮಾಡುತ್ತದೆ.

300x250 AD

ಕುಷ್ಟರೋಗದ ಬಗ್ಗೆ ಸಾಮಾನ್ಯ ವಾಗಿ ಕೇಳಲ್ಪಡುವ ಪ್ರಶ್ನೆಗಳು :
1) ಕುಷ್ಟರೋಗ ಸಾಂಕ್ರಾಮಿಕವೇ?……
ಹೌದು, ಕುಷ್ಟರೋಗ ಸಾಂಕ್ರಾಮಿಕ ರೋಗ ಆದರೆ ಎಲ್ಲರಲ್ಲೂ ಬೇಗ ಹರಡುವ ರೋಗ ಅಲ್ಲ. 95% ವಯಸ್ಕರು ಈ ರೋಗಕ್ಕೆ ತುತ್ತಾಗುವುದಿಲ್ಲ ಏಕೆಂದರೆ ಅವರ ರೋಗನಿರೋಧಕ ಶಕ್ತಿ ಕುಷ್ಟರೋಗ ಬರುವುದನ್ನು ತಡೆಯುತ್ತದೆ.
2) ಕುಷ್ಟರೋಗದಿಂದ ಕೈ ಮತ್ತು ಕಾಲು ಬೆರಳುಗಳು ಬಿದ್ದು ಹೋಗುತ್ತವೆಯೇ?….
ಕುಷ್ಟರೋಗಿಯಲ್ಲಿ ಕೈಕಾಲು ಬೆರಳು ಬಿದ್ದು ಹೋಗುವುದಿಲ್ಲ ಆದರೆ ಬ್ಯಾಕ್ಟೀರಿಯಾ ನರವನ್ನು ಹಾನಿ ಮಾಡುವುದರಿಂದ ಕೈಕಾಲು ಬೆರಳುಗಳು ಜೋಮು ಹಿಡಿದು ಪದೇ ಪದೇ ಗಾಯವಾಗುತ್ತವೆ. ಸೋಂಕು ಕಾಣಿಸಿಕೊಂಡು ಶಾಶ್ವತವಾಗಿ ಹಾನಿಯಾಗಬಹುದು ಇದು ಕೇವಲ ಚಿಕಿತ್ಸೆ ತೆಗೆದುಕೊಂಡಿರದ, ಮುಂದುವರಿದ ಕುಷ್ಟರೋಗಿಯಲ್ಲಿ ಮಾತ್ರ ಕಾಣುತ್ತದೆ.
3) ಕುಷ್ಟರೋಗಿಯು ಮನೆಯ ಸದಸ್ಯರಿಂದ ದೂರವಿರಬೇಕೇ? ಅವರನ್ನು ಬೇರ್ಪಡಿಸಬೇಕೆ?…….
ಕುಷ್ಟರೋಗಿ ಚಿಕಿತ್ಸೆ ತೆಗೆದುಕೊಂಡಲ್ಲಿ ಮನೆಯ ಸದಸ್ಯರೊಂದಿಗೆ ಇರಬಹುದು .ತಮ್ಮ ಕಾರ್ಯವನ್ನು ಮುಂದುವರಿಸಬಹುದು.
4) ಕುಷ್ಟರೋಗಕ್ಕೆ ಚಿಕಿತ್ಸೆ ಇದೆಯೇ ?ರೋಗಿ ಗುಣಮುಖವಾಗುತ್ತಾನೆಯೇ?…..
ಹೌದು, ಕುಷ್ಟರೋಗಕ್ಕೆ ಚಿಕಿತ್ಸೆ ಇದ್ದು ರೋಗಿ ಸಂಪೂರ್ಣ ಗುಣಮುಖನಾಗುತ್ತಾನೆ.
5) ಕುಷ್ಟರೋಗಿ ಎಷ್ಟು ದಿನದವರೆಗೆ ಬೇರೆಯವರಿಗೆ ರೋಗ ಹರಡಿಸಬಲ್ಲ?……
ರೋಗಿ ಚಿಕಿತ್ಸೆ ಶುರು ಮಾಡಿದ ಕೆಲವೇ ದಿನಗಳಲ್ಲಿ ಅಸಾಂಕ್ರಾಮಿಕನಾಗುತ್ತಾನೆ, ಆದರೆ ರೋಗಿಯು ಚಿಕಿತ್ಸೆಯನ್ನು ಸಂಪೂರ್ಣವಾಗಿ ತೆಗೆದುಕೊಳ್ಳಬೇಕು.

6,) ಕುಷ್ಟರೋಗಿಯ ಪಕ್ಕದಲ್ಲಿ ಕೂರುವುದರಿಂದ ರೋಗ ಬರುತ್ತದೆಯೇ?…..
ಖಂಡಿತ ಇಲ್ಲ ಕುಷ್ಟರೋಗ ಕೈಕುಲುಕುವುದರಿಂದ ಪಕ್ಕ ಕೂರುವುದರಿಂದ ಬರುವುದಿಲ್ಲ.

7.) ಕುಷ್ಟರೋಗ ಹೇಗೆ ಬರುತ್ತದೆ,?…. .ಚಿಕಿತ್ಸೆ ತೆಗೆದುಕೊಂಡಿರದ ಕೆಲವೇ ಕೆಲವು ರೋಗಿಗಳು ಬೇರೆಯವರಿಗೆ ರೋಗ ಹರಡಿಸಬಹುದು. ಸುದೀರ್ಘಕಾಲ, ನಿಕಟ ಸಂಪರ್ಕಕ್ಕೆ ಬಂದವರಲ್ಲಿ ಕೆಲವರಿಗೆ ರೋಗ ಕಾಣಿಸಬಹುದು. ರೋಗಿ ಕೆಮ್ಮುವುದರಿಂದ, ಸೀನುವುದರಿಂದ ಬ್ಯಾಕ್ಟೀರಿಯಾ ,ಹನಿಗಳ ರೂಪದಲ್ಲಿ ಗಾಳಿಗೆ ಸೇರುತ್ತದೆ .ಎದುರಿನ ವ್ಯಕ್ತಿಯ ರೋಗನಿರೋಧಕ ಶಕ್ತಿ ಕಮ್ಮಿ ಇದ್ದಲ್ಲಿ ಕುಷ್ಟರೋಗ ಬರುವ ಸಾಧ್ಯತೆ ಇದೆ.
8) ಕುಷ್ಟರೋಗ ತಾಯಿಯಿಂದ ಮಗುವಿಗೆ ಬರಬಹುದೇ? ಕುಷ್ಟರೋಗ ಲೈಂಗಿಕ ರೋಗವೇ?….
ಕುಷ್ಟರೋಗ ತಾಯಿಯಿಂದ ಮಗುವಿಗೆ ಬರುವುದಿಲ್ಲ .ಲೈಂಗಿಕವಾಗಿ ಹರಡುವಂತ ಕಾಯಿಲೆ ಅಲ್ಲ.

2023 ವಿಶ್ವ ಕುಷ್ಟರೋಗದ ವಿಷಯ Act now end Leprosy. ಅಂದರೆ ಕುಷ್ಟರೋಗ ನಿರ್ಮೂಲನೆ ಸಾಧ್ಯ .ನಮ್ಮಲ್ಲಿ ರೋಗ ಹರಡುವುದನ್ನು ತಡೆಯುವ ಶಕ್ತಿ ಮತ್ತು ಸಾಧನವಿದೆ .ಬನ್ನಿ ಕುಷ್ಟರೋಗವನ್ನು ನಾವೆಲ್ಲರೂ ಸೇರಿ ಸೋಲಿಸೋಣ.

ಮಾಹಿತಿ:

ಡಾಕ್ಟರ್ ಸುಫಲಾ.
ಚರ್ಮರೋಗ ತಜ್ಞರು
ಮಹಿಳಾ ವೈದ್ಯಕೀಯ ಘಟಕ , ಭಾರತೀಯ ವೈದ್ಯಕೀಯ ಸಂಘ , ಸಿರ್ಸಿ.

Share This
300x250 AD
300x250 AD
300x250 AD
Back to top