ಜೊಯಿಡಾ: ಕರ್ನಾಟಕದಲ್ಲಿರುವ ಬುಡಕಟ್ಟು ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಜೊಯಿಡಾದಿಂದ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಆರಂಭವಾದ ಪಾದಯಾತ್ರೆಗೆ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಕುಣಬಿಗಳು ಮುಗ್ಧರು, ಪ್ರಾಮಾಣಿಕರು, ಮರ- ಗಿಡಗಳನ್ನು ಪೂಜಿಸುವವರು. ಪಕ್ಕದ ಗೋವಾ ರಾಜ್ಯದಲ್ಲಿ 2006ರಲ್ಲಿಯೇ ಕುಣಬಿ ಜನಾಂಗದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ನಮ್ಮ ಕರ್ನಾಟಕದಲ್ಲಿ ಈವರೆಗೆ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಕೇಂದ್ರ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇಲ್ಲಿನ ಮೂಲ ನಿವಾಸಿಗಳಾದ ಕುಣಬಿಗಳು ಕಾಡನ್ನು ರಕ್ಷಿಸಿ ಬೆಳೆಸಿದ್ದಾರೆ. ಮುಂದೆ ನಾನು ಅಧಿಕಾರದಲ್ಲಿ ಇರಲಿ, ಇರದೇ ಇರಲಿ; ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನ ಮಾಡುತ್ತೇನೆ. ಮೂರು ದಿನಗಳ ನಿಮ್ಮ ಪಾದಯಾತ್ರೆ ಯಶಸ್ವಿಯಾಗಲಿ ಎಂದರು.
ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿ, ಕರ್ನಾಟಕದಲ್ಲಿರುವ ಕುಣಬಿಗಳಿಗೆ ಅನ್ಯಾಯವಾಗಿದೆ. ಸರ್ಕಾರ ಸುಳ್ಳು ಭರವಸೆ ಕೊಡುವುದನ್ನು ಬಿಟ್ಟು ನಮ್ಮ ಕುಣಬಿ ಜನಾಂಗವನ್ನು ಎಸ್ಟಿಗೆ ಸೇರಿಸಬೇಕು. ಇದರಿಂದ ಹಿಂದುಳಿದ ನಮಗೆ ನ್ಯಾಯ ಸಿಗುತ್ತದೆ ಹಾಗೂ ನಮ್ಮ ಸಮಾಜದ ಅಭಿವೃದ್ಧಿ ಆಗುತ್ತದೆ. ನಮ್ಮಲ್ಲಿ ನಾಯಕತ್ವದ ಕೊರತೆ ಇದೆ, ಶಿಕ್ಷಣ ಕಡಿಮೆ ಇದೆ. ಸರ್ಕಾರದ ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದರಿಂದ ಮೂಲಸೌಲಭ್ಯ ವಂಚಿತ ಜನರಿಗೆ ಸೌಲಭ್ಯ ಸಿಗುತ್ತದೆ. ಅರಣ್ಯ ಅತಿಕ್ರಮಣ ಜಮೀನುಗಳು ಮಂಜೂರಾಗುತ್ತವೆ, ನಮ್ಮ ಜನರ ಬೇಡಿಕೆಗಳು ಈಡೇರುತ್ತವೆ ಎಂದರು.
ಈ ಸಂದರ್ಭದಲ್ಲಿ ಜೊಯಿಡಾ ಕುಣಬಿ ಸಮಾಜದ ಅಧ್ಯಕ್ಷ ಅಜಿತ್ ಮಿರಾಶಿ, ಬ್ಲಾಕ್ ಅಧ್ಯಕ್ಷ ಸದಾನಂದ ದಬ್ಗಾರ್, ಮಾಜಿ ಜಿ.ಪಂ ಸದಸ್ಯ ರಮೇಶ ನಾಯ್ಕ, ವಿನಯ ದೇಸಾಯಿ, ರವಿ ರೇಡ್ಕರ್, ರಫೀಕ್ ಖಾಜಿ, ವಾಮನ ಮಿರಾಶಿ, ದಿವ್ಯಾನಿ ಗಾವಡಾ, ಗುರದತ್ತ ಮಿರಾಶಿ, ಪ್ರೇಮಾನಂದ ವೆಳಿಪ್ ಇತರರು ಪಾಲ್ಗೊಂಡಿದ್ದರು.