ಹೊನ್ನಾವರ: ತಾಲೂಕಿನ ಕಾಸರಕೋಡು ಟೊಂಕ ಶ್ರೀಜೈನ ಜಟಕೇಶ್ವರ ಯುವಕ ಸಮಿತಿ ಇದರ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಲವು ಆಶೋತ್ತರಗಳ ನಿಲುವಿನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೊಂಕಣಿ ಖಾರ್ವಿ ಸಮಾಜದ ಆಸ್ಮಿತೆಯ ಹೊಸ ಮನ್ವಂತರಕ್ಕೆ ನಾಂದಿ ಹಾಡಿತು.
ಖಾರ್ವಿ ಆನ್ಲೈನ್ ಸಂಪಾದಕ ಕೋಟ್ಯಾನ್ ಸುಧಾಕರ್ ಖಾರ್ವಿ ಮಾತನಾಡಿ, ಹಿಂದೂ ಧರ್ಮ ಮತ್ತು ದೇಶದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ನಡೆಸಿದ ಖಾರ್ವಿ ಸಮಾಜ ಇಂದು ನೆಲೆ ಕಳೆದುಕೊಳ್ಳುವ ಆತಂಕದಲ್ಲಿದೆ. ಛತ್ರಪತಿ ಶಿವಾಜಿಯ ಸೈನ್ಯದಲ್ಲಿ ಸೈನಿಕರಾಗಿ ದೇಶದ್ರೋಹಿಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ವೀರಪರಂಪರೆಯ ಹೆಗ್ಗಳಿಕೆಯ ಭವ್ಯ ಇತಿಹಾಸ ಖಾರ್ವಿ ಸಮಾಜಕ್ಕಿದೆ. ಅಂತಹ ಪರಾಕ್ರಮಿ ಸಮಾಜ ಇಂದು ಕರಾವಳಿಯೂದ್ದಕ್ಕೂ ತಮ್ಮ ಮನೆಬದುಕು ಕಳೆದುಕೊಳ್ಳುವ ಆತಂಕದಲ್ಲಿದೆ. ಕಾಸರಕೋಡು ಟೊಂಕಾ ಇದಕ್ಕೆ ಜ್ವಲಂತ ಸಾಕ್ಷಿಯಾಗಿದ್ದು, ನಮ್ಮ ಸಮಾಜದ ರಾಜಕೀಯ ಪ್ರಾತಿನಿಧ್ಯ ಮತ್ತು ಆರ್ಥಿಕ ಹಿಂದುಳಿವಿಕೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಇದನ್ನೆಲ್ಲಾ ಮೆಟ್ಟಿ ನಿಂತು ಸಮಾಜ ಸುದೃಡವಾಗಲು ಎಲ್ಲರೂ ಶ್ರಮಿಸಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸೇಫ್ ಸ್ಟಾರ್ ಮ್ಯಾನೇಜಿಂಗ್ ಡೈರಕ್ಟರ್ ಜಿ.ಜಿ.ಶಂಕರ ಮಾತನಾಡಿ, ಅನೇಕ ಸವಾಲುಗಳ ಮಧ್ಯೆ ಸಾಹಸಮಯ ಜೀವನ ನಡೆಸುತ್ತಿರುವ ಸಮಾಜ ಕ್ರೀಡೆ ಸಾಂಸ್ಕೃತಿಕ ಅಪಾರ ಶ್ರೀಮಂತವಾಗಿದೆ ಎಂದರು.
ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತಾರವರನ್ನು ಉತ್ಸವ ಸಮಿತಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಧನ್ಯತೆ ಮೆರೆಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಜಗದೀಶ ತಾಂಡೇಲ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೀನುಗಾರರ ಜೀವಸೆಲೆ ಕಾಸರಕೋಡು ಟೊಂಕದಲ್ಲಿ ಎರಡು ದಿನ ನಡೆದ ಈ ಕಾರ್ಯಕ್ರಮ ಸಂಗೀತ, ನೃತ್ಯ, ನಾಟಕ ಮುಂತಾದ ಕಲಾಪ್ರಕಾರಗಳಿಂದ ಶೋಭಾಯಮಾನವಾಗಿ ಸಂಪನ್ನಗೊಂಡಿತು. ಶ್ರೀಜೈನ ಜಟಕೇಶ್ವರ ಸಮಿತಿ ಟೊಂಕ ವಾರ್ಷಿಕೋತ್ಸವದ ಆಚರಣೆಯ ಮೂಲಕ ಹತ್ತು ಹಲವು ಸಮಾಜಮುಖಿ ಕಾರ್ಯ ಜನಮನಸೊರೆಗೊಂಡಿತು. ಎರಡನೇ ದಿನ ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾಭಿಮಾನಿಗಳ ಮನಸೂರೆಗೊಂಡಿತು.