ಸಿದ್ದಾಪುರ: ತಂತ್ರಜ್ಞಾನದ ಯುಗದಲ್ಲಿ ಸಂಬoಧಗಳನ್ನು ಮರೆತು ಬದುಕುತ್ತಿದ್ದೇವೆ. ಸಂವೇದನಾಶೀಲರಾಗಬೇಕಾದ ನಾವು ಸಂವೇದನೆಗಳೆ ಇಲ್ಲದೆ ಜೀವನ ನಡೆಸುವಂತಾಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ ವಾನಳ್ಳಿ ಹೇಳಿದರು.
ಅವರು ತಾಲ್ಲೂಕಿನ ಕಿಲಾರದಲ್ಲಿ ನಡೆದ ಗಣೇಶ ಹೆಗಡೆ ಅವರ ಸಂಸ್ಮರಣ ಗ್ರಂಥದ ಲೋಕಾರ್ಪಣೆ ಸಮಾರಂಭದ ಅತಿಥಿಗಳಾಗಿ ಮಾತನಾಡಿದರು. 140 ವರ್ಷಗಳ ಹಿಂದೆ ಹುಟ್ಟಿ, 55 ವರ್ಷಗಳ ಹಿಂದೆ ತೀರಿಕೊಂಡ ಗಣೇಶ ಹೆಗಡೆಯವರನ್ನು ನಾವು ಇಂದು ಸ್ಮರಿಸುತ್ತೇವೆ ಎಂದರೆ ಅವರ ವ್ಯಕ್ತಿತ್ವದ ಎಷ್ಟು ಉನ್ನತ ಮಟ್ಟದಲ್ಲಿತ್ತು ಎಂಬುದು ಅರಿವಾಗುತ್ತದೆ ಎಂದರು.
ಗ್ರoಥ ಪರಿಚಯ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ವಿಮರ್ಶಕ ಟಿ.ಪಿ.ಅಶೋಕ ಮಾತನಾಡಿ, ಕುಟುಂಬ ಹೇಗೆ ತಮ್ಮ ಹಿರಿಯರನ್ನು ಸ್ಮರಿಸಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಒಳ್ಳೆಯ ನಿದರ್ಶನ. ಸಮಾಜ ಸುಧಾರಣೆಗೆ ಮತ್ತು ಮೂಢನಂಬಿಕೆಗಳ ವಿರುದ್ಧ ಜಾಗೃತಿಗೆ ಗಣೇಶ ಹೆಗಡೆಯವರ ಕೊಡುಗೆ ಅಪಾರ. ಅವರ ಈ ಸಂಸ್ಮರಣ ಗ್ರಂಥದಲ್ಲಿ ಅವರು ಎದುರಿಸಿದ ಸವಾಲುಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿಸ್ತೃತವಾಗಿ ತೆರೆದಿಡಲಾಗಿದೆ ಎಂದರು.
ಶಾoತ ಹೆಗಡೆ ಕಿಲಾರ ಗಣೇಶ ಹೆಗಡೆಯವರ ಸಂಸ್ಮರಣ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು.ಹೇರಂಭ ಹೆಗಡೆ ಕಿಲಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ನಾ. ಡಿಸೋಜಾ ದಂಪತಿಗಳಿಗೆ ಮತ್ತು ಎಂ.ಆರ್ ಲಕ್ಷ್ಮಿನಾರಾಯಣ್ ಅಮಚಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜಯಪ್ರಕಾಶ ಹೆಗಡೆ ಬಸ್ತಿಬೈಲ್ ಪ್ರಾಸ್ತಾವಿಕ ಮಾತನಾಡಿದರು.
ಅಮೃತ ಹೆಗಡೆ ಕಿಲಾರ ಸ್ವಾಗತಿಸಿದರು. ಕೀರ್ತಿ ಹೆಗಡೆ ಪ್ರಾರ್ಥಿಸಿದರು. ಮಹಿಮಾ ಭಟ್ ನಿರೂಪಿಸಿದರು. ಸತೀಶ ಹೆಗಡೆ ಕಿಲಾರ ವಂದಿಸಿದರು. ಗ್ರಂಥ ಸಮಿತಿಯ ಗೌರವ ಉಪಾಧ್ಯಕ್ಷ ಡಾ.ಪ್ರಭಾಶಂಕರ ಹೆಗಡೆ, ಬರಹಗಾರ ಶಿವಾನಂದ ಕಳವೆ, ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ, ಶಿವಾನಂದ ಹೆಗಡೆ ಕೆರೆಮನೆ, ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ಕೃಷ್ಣಮೂರ್ತಿ ಹೆಬ್ಬಾರ್, ಡಾ.ರಾಜಾರಾಮ್ ಹೆಗಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಈಗ ಸಂವೇದನೆಗಳೇ ಇಲ್ಲದ ಜೀವನ ಸೃಷ್ಟಿಯಾಗಿದೆ: ಡಾ.ನಿರಂಜನ ವಾನಳ್ಳಿ
