ಹಿರೇಗುತ್ತಿ: ನಕಾರಾತ್ಮಕ ಯೋಚನೆಗಳು ಮಾನಸಿಕವಾಗಿ ದುರ್ಬಲಗೊಳಿಸಿದರೆ ಸಕಾರಾತ್ಮಕ ಯೋಚನೆಗಳು ಸಂಕಷ್ಟ ಸಂದರ್ಭಗಳಲ್ಲಿಯೂ ಬದುಕುವುದನ್ನು ಕಲಿಸಿಕೊಡುತ್ತದೆ. ಹರೆಯದಲ್ಲಿ ಬಾಲ- ಬಾಲಕಿಯರಲ್ಲಿ ಆಗುವ ಎಲ್ಲಾ ಬಾಹ್ಯ ಶಾರೀರಿಕ ಬದಲಾವಣೆಗಳ ಜೊತೆಗೆ ಅದರಲ್ಲಿ ಗಮನಾರ್ಹವಾದ ಮಾನಸಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ ಎಂದು ಕುಮಟಾ ತಾಲೂಕಾ ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ ನುಡಿದರು.
ಅವರು ಆರೋಗ್ಯ ಇಲಾಖೆ ಹಾಗೂ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಹದಿಹರೆಯದವರ ಆರೋಗ್ಯ ಶಿಕ್ಷಣ ಕಾರ್ಯಕ್ರಮ ‘ಎಡೋಲೊಸೆಂಟ್ ಹೆಲ್ತ್ ಪ್ರೋಗ್ರಾಮ್’ ಉದ್ಘಾಟಿಸಿ ಉಪನ್ಯಾಸ ನೀಡಿದರು.
ಹದಿಹರೆಯದಲ್ಲಿ ಕೋಪ, ನಿರಾಶೆ, ಆಕ್ರಮಣ ಪ್ರವೃತ್ತಿ, ಅವಮಾನ, ಸಂಘರ್ಷ, ಆಧುನಿಕತೆ ಮತ್ತು ಸಂಪ್ರದಾಯ ಇವುಗಳ ನಡುವೆ ಯಾವುದು ಸ್ವೀಕರಿಸಬೇಕು ಎನ್ನುವ ಗೊಂದಲ ಉಂಟಾದಾಗ ಇದಕ್ಕೆ ಸರಿಯಾದ ಮಾರ್ಗದರ್ಶನ ಅಗತ್ಯ ಪ್ರೀತಿಯ ಕೊರತೆ ಹದಿಹರೆಯದಲ್ಲಿ ಕಂಡುಬರುತ್ತದೆ. ಮೇಲರಿಮೆ ಮತ್ತು ಕೀಳರಿಮೆ ಇಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಹದಿಹರೆಯದಲ್ಲಿ ಮಾನಸಿಕ ಬದಲಾವಣೆ, ದೈಹಿಕ ಬದಲಾವಣೆ, ಹಾರ್ಮೋನುಗಳ ಉತ್ಪತ್ತಿ, ಆಕರ್ಷಣೆ ಉಂಟಾಗುತ್ತದೆ ಇದನ್ನು ಹದಿಹರೆಯದಲ್ಲಿ ನಿಯಂತ್ರಿಸಿದರೆ ಉತ್ತಮ ಆರೋಗ್ಯದೊಂದಿಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದರು.
ಹಿರೇಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಥ್ವಿ ಪಕ್ಕುಂದ ಮಾತನಾಡಿ, ಆರೋಗ್ಯ ಇಲಾಖೆಯಿಂದ ಹದಿಹರೆಯದವರಿಗೆ ನೀಡುವ ಶಿಕ್ಷಣದ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿ, ಲೈಂಗಿಕ ಶಿಕ್ಷಣ, ಹದಿಹರೆಯದ ಸಮಸ್ಯೆ, ಕಾಯಿಲೆಗಳು, ಆರೋಗ್ಯದ ಗುಟ್ಟು, ಮಾನಸಿಕ ಬದಲಾವಣೆ ಮುಂತಾದ ವಿಷಯಗಳ ಕುರಿತು ಶಿಕ್ಷಣವನ್ನು ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ.ನಾಯ್ಕ ಮಾತನಾಡಿ, ಆಯುಷ್ಮಾನ್ ಭಾರತ್ ಕಾರ್ಡ್ ಪ್ರಯೋಜನ ಪಡೆದುಕೊಳ್ಳಿ ಹಾಗೂ ಆರೋಗ್ಯವಂತ ಮಗು ದೇಶದ ಸಂಪತ್ತು ಹದಿಹರೆಯದ ಶಿಕ್ಷಣ ಇಂತಹ ಕಾರ್ಯಕ್ರಮಗಳಿಂದ ಆರೋಗ್ಯದ ಮಹತ್ವದ ಅರಿವು ಮಗುವಿಗೆ ಆಗುವುದರಿಂದ ಸದೃಡ ಪ್ರಜೆಗಳ ನಿರ್ಮಾಣಕ್ಕೆ ಸಹಾಯಕವಾಗಿದೆ. ಧನಾತ್ಮಕವಾಗಿ ಯೋಚಿಸಿ ಆನಂದಿಸಿರಿ ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ ಮಾತನಾಡಿ, ವಿದ್ಯಾರ್ಥಿಗಳಿಗೆ ನೀತಿ ಪ್ರಧಾನವಾದ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಅತೀ ಪ್ರಮುಖ ಅಂಶವೇ ಧನಾತ್ಮಕತೆ. ಎಲ್ಲಾ ಒಳ್ಳೆಯ ಆಲೋಚನೆಗಳಿಗೆ ಶ್ರೇಷ್ಠ ಕೆಲಸಗಳಿಗೆ ಮೂಲ ಆಧಾರ ಧನಾತ್ಮಕ ಚಿಂತನೆ. ಕಾರ್ಯಕ್ರಮದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದರು.
ಕುಮಟಾ ಆಸ್ಪತ್ರೆಯ ಐಸಿಟಿಸಿ ಕೌನ್ಸಿಲರ್ ಪ್ರದೀಪ ನಾಯ್ಕ, ಗಂಡುಮಕ್ಕಳಿಗೆ ಹದಿಹರೆಯದಲ್ಲಿ ಆರೋಗ್ಯವಂತ, ದೈಹಿಕ, ಮಾನಸಿಕ, ಭಾವನಾತ್ಮಕ ಬದಲಾವಣೆಗಳು ಹಾಗೂ ತಮ್ಮ ಜೀವನದ ಗುರಿಗಳನ್ನು ಸಾಧಿಸಲು ಏಕಾಗ್ರತೆಯನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಕುರಿತು ವಿವಿಧ ಚಟುವಟಿಕೆಗಳ ಮೂಲಕ ಉಪನ್ಯಾಸ ನೀಡಿದರು.
ಶಿಕ್ಷಕ ನಾಗರಾಜ ನಾಯಕ ಬಹುಮಾನ ವಿಜೇತರ ಯಾದಿ ವಾಚಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸಂಜನಾ ಎಸ್.ಗೌಡ, ದ್ವಿತೀಯ ನಾಗರತ್ನ ಗೌಡ ಹಾಗೂ ಮಾದೇವಿ ಗೌಡ ತೃತೀಯ ಬಹುಮಾನ ಪಡೆದರು. ನಾಗಶ್ರೀ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾರ್ಥಿ ಪ್ರತಿನಿಧಿ ಎಮ್.ಜಿ.ನಾಗಭೂಷಣ ಸರ್ವರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಕಾಂಚಿಕಾ ನಾಯಕ ನಿರೂಪಣೆ ಮಾಡಿದರು. ವಿದ್ಯಾರ್ಥಿ ವಿಜೇತ ಗುನಗಾ ವಂದಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಹಿರೇಗುತ್ತಿ ಆಸ್ಪತ್ರೆಯ ಶಾರದಾ ಜೋಶಿ, ಬಿ.ಪಿ.ಪಟಗಾರ, ರತನ ನಾಯ್ಕ, ಅಡಿವೆಪ್ಪ ಮಳಗಲಿ, ಶಿಕ್ಷಕರಾದ ಬಾಲಚಂದ್ರ ಹೆಗಡೇಕರ್, ಎನ್.ರಾಮು.ಹಿರೇಗುತ್ತಿ, ವಿಶ್ವನಾಥ ಬೇವಿನಕಟ್ಟಿ, ಇಂದಿರಾ ನಾಯಕ, ಮಹಾದೇವ ಗೌಡ, ಜಾನಕಿ ಗೊಂಡ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಇದ್ದರು.