ಶಿರಸಿ : ಇದೇ ಮೊದಲ ಬಾರಿ ತಾಲೂಕಿನ ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲ ನಕ್ಷೆ -ಹಳ್ಳಿಗದ್ದೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಂದೇಶ-11 ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ತಾಲೂಕಿನ ಬಕ್ಕಳದ ಸತ್ಯನಾಥೇಶ್ವರ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಒಟ್ಟೂ 20 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ವಾನಳ್ಳಿಯ ವರದೇಶ್ವರ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಕ್ರಮವಾಗಿ 11,111 ಹಾಗೂ 7,777 ಪ್ರಶಸ್ತಿ ಮೊತ್ತವನ್ನು ತಂಡವು ತಮ್ಮದಾಗಿಸಿಕೊಂಡಿದೆ.
ಶನಿವಾರ ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಪಂದ್ಯಾವಳಿಯನ್ನು ಉದ್ಘಾಟಿಸಿ, ಶುಭ ಕೋರಿದರು. ಆಮ್ ಆದ್ಮಿ ಪಕ್ಷದ ಹಿತೇಂದ್ರ ನಾಯ್ಕ, ಹುಲೇಕಲ್ ಗ್ರಾಪಂ ಉಪಾಧ್ಯಕ್ಷ ಪ್ರಕಾಶ ಹೆಗಡೆ, ಎಸ್.ಕೆ.ಭಾಗ್ವತ್, ಖಾಸಿಂ ಸಾಬ, ಮಂಜು, ಹೇಮಂತ್ ಹೆಗಡೆ ಮುಂತಾದವರು ಭಾಗವಹಿಸಿದ್ದರು.
ಭಾನುವಾರ ಸಂಜೆಯ ಸಮಾರೋಪ ಕಾರ್ಯಕ್ರಮದಲ್ಲಿ ನ್ಯಾಯವಾದಿ ರವೀಂದ್ರ ನಾಯ್ಕ ಹಾಗೂ ಸಾಮಾಜಿಕ ಮುಖಂಡೆ ರಾಜೇಶ್ವರಿ ಹೆಗಡೆ ಭಾಗವಹಿಸಿ ಬಹುಮಾನ ವಿತರಿಸಿದರು. ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟ್ಸಮೆನ್ ಆಗಿ ವಾನಳ್ಳಿ ವರದೇಶ್ವರ ತಂಡದ ರಮೇಶ ಧೂಳಳ್ಳಿ, ಉತ್ತಮ ಬಾಲರ್ ಆಗಿ ಸಂದೇಶ-11 ತಂಡದ ಪ್ರಸನ್ನ ಹಾಗೂ ಆಲ್ ರೌಂಡರ್ ಆಗಿ ಸಂದೇಶ-11 ತಂಡದ ಸಮೀರ್ ಮಳಗಿ ಪ್ರಶಸ್ತಿ ಪಡೆದುಕೊಂಡರು.
ಎರಡು ದಿನಗಳ ಕಾಲ ಅತ್ಯುತ್ತಮವಾಗಿ ಪಂದ್ಯಾವಳಿಯನ್ನು ಸಂಘಟನೆ ಮಾಡಲಾಗಿತ್ತು. ಸಂಕ್ರಾತಿ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಪಂದ್ಯಾವಳಿಯಲ್ಲಿ ಯುವಕ ಮಂಡಳದ 50 ಕ್ಕೂ ಅಧಿಕ ಯುವಕರು ಪಾಲ್ಗೊಂಡು ಗ್ರಾಮೀಣ ಭಾಗದಲ್ಲಿ ಸಂಘಟನೆ, ಸೌಹಾರ್ದತೆ ಮುಂದುವರೆಸಿಕೊಂಡು ಹೋಗುವ ಕೆಲಸ ಮಾಡಿದರು.