ಕಾರವಾರ: ಅಂಕೋಲಾ ತಾಲೂಕಿನ ಹಾರವಾಡದಲ್ಲಿ ಜ.16ರಂದು ಬೆಳಿಗ್ಗೆ 11.00 ಗಂಟೆಗೆ ಹಮ್ಮಿಕೊಂಡಿರುವ ಸಾಂಕೇತಿಕ ರೈಲ್ ರೋಖೋ ಪ್ರತಿಭಟನೆಗೆ ಜಿಲ್ಲೆಯ ಈರ್ವರು ಪದ್ಮಶ್ರೀಗಳು ಸ್ವಖುಷಿಯಿಂದ ಪಾಲ್ಗೊಳ್ಳುವ ಸೂಚನೆ ನೀಡಿದ್ದಾರೆ.
ಹಾರವಾಡ, ಮಿರ್ಜಾನ್, ಚಿತ್ರಾಪುರದಲ್ಲಿ ಮೆಮು ರೈಲು ನಿಲುಗಡೆಯಾಗಬೇಕು. ಹಾರವಾಡ ಫ್ಲಾಟ್‌ಫಾರ್ಮ್ ಮೇಲ್ದರ್ಜೆಗೇರಿಸಬೇಕು ಹಾಗೂ ಎಕ್ಸ್ಪ್ರೆಸ್ ರೈಲನ್ನಾಗಿ ಮೆಮುವನ್ನ ಅಪ್‌ಗ್ರೇಡೇಶನ್ ಮಾಡಿರುವುದನ್ನ ಕೈಬಿಟ್ಟು ಮೊದಲಿನಂತೆ ಪ್ಯಾಸೆಂಜರ್ ರೈಲಾಗಿ ಓಡಿಸಬೇಕು ಎಂದು ಆಗ್ರಹಿಸಿ ಜನಶಕ್ತಿ ವೇದಿಕೆಯ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ಈ ರೈಲ್ ರೋಖೋ ನಡೆಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ಪಡೆದ ಪದ್ಮಶ್ರೀಗಳಾದ ವೃಕ್ಷಮಾತೆ ತುಳಸಿ ಗೌಡ ಹಾಗೂ ಜಾನಪದ ಕೋಗಿಲೆ ಸುಕ್ರಿ ಗೌಡ ಅವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಆಯೋಜಕರಿಗೆ ತಿಳಿಸಿದ್ದಾರೆ. ಈ ಬೇಡಿಕೆಗಳು ಅನಿವಾರ್ಯವಾಗಿ ಈಡೇರಬೇಕಾದದ್ದಾಗಿದ್ದು, ಕೊಂಕಣ ರೈಲ್ವೆ ಈ ಬೇಡಿಕೆಯನ್ನು ಈಡೇರಿಸಬೇಕಿದೆ. ನಮ್ಮ ಜನರ ಅನುಕೂಲಕ್ಕಾಗಿ ನಾವು ಕೂಡ ಈ ರೈಲ್ ರೋಖೋ ಪ್ರತಿಭಟನೆಗೆ ಬೆಂಬಲಿಸಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ಇವರೊಂದಿಗೆ ಸ್ಥಳೀಯ ಹಾರವಾಡ, ಹಟ್ಟಿಕೇರಿ, ಅವರ್ಸಾ,ಅಲಗೇರಿ, ಬೇಲೇಕೇರಿ, ಅಮದಳ್ಳಿ, ತೊಡುರು, ಪಂಚಾಯತಿ ಪ್ರತಿನಿಧಿಗಳನ್ನೂ ಆಯೋಜಕರು ಆಹ್ವಾನಿಸಿದ್ದು, ಅವರಿಂದಲೂ ಸಹಕಾರ ಸಿಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ರೈಲ್ ರೋಖೋ ಪ್ರತಿಭಟನೆಯ ಮೂಲಕ ಜನೋಪಯೋಗಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರತಿಭಟನೆಗೆ ಎಲ್ಲರೂ ಸಹಕಾರ ನೀಡುವಂತೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಕೋರಿದ್ದಾರೆ.