ಶಿರಸಿ: ಜನವರಿ 15ರಂದು ನಡೆಯಲಿರುವ ‘ನಮ್ಮ ಹೆಮ್ಮೆ ನಮ್ಮ ಕಾಗೇರಿ’ ಕಾರ್ಯಕ್ರಮವು ಕೇವಲ ಅಭಿನಂದನಾ ಕಾರ್ಯಕ್ರಮವಾಗಿರದೇ, ಅಭಿನಂದನಾಪೂರ್ವಕ ಬೀಳ್ಕೊಡುಗೆ ಕಾರ್ಯಕ್ರಮವಾಗಿದೆ ಎಂದು ಕಾಂಗ್ರೆಸ್ ನಾಯಕ ಶ್ರೀಪಾದ ಹೆಗಡೆ ಕಡವೆ ಟೀಕಿಸಿದ್ದಾರೆ.
ಕಳೆದ 30 ವರ್ಷಗಳಿಂದ ಶಾಸಕ ಸ್ಥಾನದಲ್ಲಿ ಕುಳಿತು, ಸಚಿವರಾಗಿ, ಇದೀಗ ಸಭಾಪತಿಗಳಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕ್ಷೇತ್ರದ ಬಗ್ಗೆ ತೋರಿರುವ ನಿರಾಸಕ್ತಿ ಪ್ರತಿಯೊಬ್ಬರಿಗೂ ತಿಳಿದಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗುತ್ತಿರುವ ಈ ಅಭೂತಪೂರ್ವ ಬೀಳ್ಕೊಡುಗೆ ಕಾರ್ಯಕ್ರಮ ಇತಿಹಾಸದಲ್ಲಿ ದಾಖಲಾಗಲಿದೆ. ಓರ್ವ ಶಾಸಕನಿಗೆ ಇದಕ್ಕಿಂತ ಉತ್ತಮವಾದ ಬೀಳ್ಕೊಡುಗೆ ಸಿಗಲಾರದು ಎಂದಿದ್ದಾರೆ.
ಕ್ಷೇತ್ರದ ಜನತೆ ಕಾಗೇರಿಯವರ ಕಾರ್ಯವೈಖರಿಗೆ ಬೇಸತ್ತಿದ್ದಾರೆ. ‘ಕಾಗೇರಿಗೆ ಸಾಕು ಶಾಸಕನ ಪೋಷಾಕು’ ಎಂದು ವ್ಯಂಗ್ಯವಾಡುತ್ತಿರುವುದು ಎಲ್ಲೆಡೆ ಕೇಳಿ ಬರುತ್ತಿದೆ. ಕಾಗೇರಿ ಅಭಿನಂದನಾ ಸಮಿತಿಯವರು ಯಾಕೆ ಅಭಿನಂದಿಸುತ್ತಿದ್ದೇವೆ ಎಂದು ಈಗಾಗಲೇ ಸಾಕಷ್ಟು ಕಾರಣಗಳನ್ನು ನೀಡಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಮಾಡುತ್ತಿರುವ ಈ ಕಾರ್ಯಕ್ರಮವು ಚುನಾವಣೆಯ ಪೂರ್ವಸಿದ್ಧತೆಯ ಸಭೆಯಂತಿದೆ. ತಮ್ಮ ವೈಫಲ್ಯವನ್ನು ಮುಚ್ಚಿಡಲು, ಅಭಿನಂದನೆಯ ಹೆಸರಿನಲ್ಲಿ ನಮ್ಮ ಹೆಮ್ಮೆ ನಮ್ಮ ಕಾಗೇರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸೋಲಿನ ಭೀತಿಯಲ್ಲಿರುವ ಕಾಗೇರಿಯವರಿಗೆ ಆಸರೆಯಾಗಿ ಉಳಿದಿರುವುದು ಇದೀಗ ನಡೆಯಲಿರುವ ಕಾರ್ಯಕ್ರಮ. ಆದರೆ ಇದು ಕೇವಲ ಅಭಿನಂದನೆಯಲ್ಲದೇ ಬೀಳ್ಕೊಡುಗೆ ಕಾರ್ಯಕ್ರಮವೂ ಆಗಿದೆ. ಕಾಗೇರಿಯವರು ಪ್ರಕೃತಿ ವಿಕೋಪದಿಂದ ಅಡಿಕೆ ಬೆಳೆಗಾರರಿಗಾದ ನಷ್ಟ ಪರಿಹಾರ ಕೊಡಿಸುವಲ್ಲಿ ವಿಫಲವಾಗಿದ್ದಾರೆ. ಸರ್ಕಾರಿ ಇಲಾಖೆಗಳ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ನಿರಾಸಕ್ತಿ ವಹಿಸಿದ್ದಾರೆ. ಅಲ್ಲದೇ ಕಳಪೆ ಕಾಮಗಾರಿಗಳಿಗೆ ರಿಬ್ಬನ್ ಮತ್ತು ಗುದ್ದಲಿ ಭಾಗ್ಯ ಮಾಡಿದ್ದು, ರೈತರಿಗೆ ಬೆಳೆ ವಿಮೆ, ಸಾಲ ಮನ್ನಾ ಹಣ ಬಿಡುಗಡೆ ಮಾಡಿಸುವಲ್ಲಿ ದಿವ್ಯ ಮೌನವಹಿಸಿದ್ದಾರೆ ಎಂದಿದ್ದಾರೆ.
ಸರ್ಕಾರಿ ಇಲಾಖೆಗಳಿಂದ ಕ್ಷೇತ್ರದ ಜೀವಾಳದಂತಿರುವ ಸಹಕಾರಿ ಸಂಘಗಳ ನಿರಂತರ ಶೋಷಣೆಗೆ ಮೌನವಹಿಸಿದ್ದು, ಅವರ ಆಡಳಿತದ ಅವಧಿಯಲ್ಲಿ ಕ್ಷೇತ್ರದಲ್ಲಿ ನಿರುದ್ಯೋಗದ ತಾಂಡವಾಡುತ್ತಿದೆ. ಇಂಜಿನಿಯರಿಂಗ್- ಮೆಡಿಕಲ್ ಕಾಲೇಜುಗಳನ್ನು ಕ್ಷೇತ್ರದಲ್ಲಿ ಪ್ರಾರಂಭಿಸಲು 30 ವರ್ಷಗಳ ಸುದೀರ್ಘ ಕಾಲಾವಧಿಯಿಂದಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಮಾಡಿದ್ದು, ಹಳ್ಳಿ- ಹಳ್ಳಿಗಳಲ್ಲಿ ರಾಜಾರೋಷವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದರು ತಪ್ಪಿಸಿಲ್ಲ. ಅಲ್ಲದೇ ಮಾಧ್ಯಮ ಹೇಳಿಕೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೀಮಿತವಾಗಿದ್ದು, ಈ ಎಲ್ಲಾ ಕಾರಣಗಳಿಗೆ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ನೀಡುತ್ತಿರುವ ಬೀಳ್ಕೊಡುಗೆಯು ಸೂಕ್ತವಾಗಿದೆ. ನಮ್ಮ ಭಾಗದ ಶಾಸಕರ ಅಭಿನಂದನಾಪೂರ್ವಕ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದ ನಾಯಕರು ಆಗಮಿಸುತ್ತಿರುವುದು ಸಂತೋಷದ ವಿಚಾರ ಎಂದು ಶ್ರೀಪಾದ ಹೆಗಡೆ ಕಡವೆ ಹೇಳಿದ್ದಾರೆ.