Slide
Slide
Slide
previous arrow
next arrow

ಯಶಸ್ವಿಯಾಗಿ ನಡೆದ ಕೃಷಿ ಉತ್ಪನ್ನಗಳ ಮೌಲ್ಯವರ್ಧನಾ ಕಾರ್ಯಾಗಾರ

300x250 AD

ಶಿರಸಿ: ನೆಲಸಿರಿ ರೈತ ಉತ್ಪಾದಕ ಕಂಪನಿಯು ನಬಾರ್ಡ್ ಸಹಕಾರದಲ್ಲಿ ‘ನನ್ನ ಜಿಲ್ಲೆ ನನ್ನ ಪ್ರಾಜೆಕ್ಟ್’ (My District My Project) ಯೋಜನೆಯಡಿ ಜ.13. ಶುಕ್ರವಾರದಂದು ತಾಲೂಕಿನ ಮಾವಿನಕೊಪ್ಪದ ಮಹಾದೇವ ಸೋಮೇಶ್ವರ ಹೆಗಡೆಯವರ ಮನೆಯಂಗಳದಲ್ಲಿ ಹಲಸು, ಬಾಳೆ ಮತ್ತಿತರ ಸ್ಥಳೀಯ ಕೃಷಿ ಉತ್ಪನ್ನಗಳ ಮೌಲ್ಯವರ್ಧನಾ ಕಾರ್ಯಾಗಾರವನ್ನು  ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದ ನಬಾರ್ಡ್ ಡಿಡಿಎಂ ರೇಜಿಸ್ ಇಮ್ಯಾನುಯಲ್, ರಾಜ್ಯದಲ್ಲಿ ಕೇವಲ ನೆಲಸಿರಿ ಸಂಸ್ಥೆ ಮಾತ್ರ ‘ನನ್ನ ಜಿಲ್ಲೆ ನನ್ನ ಪ್ರಾಜೆಕ್ಟ್’ ಗೆ ನಬಾರ್ಡ್ ಮೂಲಕ ಆಯ್ಕೆಯಾಗಿದೆ. ಹಲಸು, ಬಾಳೆಯಂಥ ಇಲ್ಲಿನ ಸ್ಥಳೀಯ ಉತ್ಪನ್ನಗಳಿಗೆ ಸೂಕ್ತ ಮೌಲ್ಯವರ್ಧನೆಯಾದಲ್ಲಿ ಮಾರುಕಟ್ಟೆಯಲ್ಲಿ ಅಪಾರ ಅವಕಾಶಗಳಿವೆ. ಅದಕ್ಕಾಗಿ ನೆಲಸಿರಿ ಸಂಸ್ಥೆಯ ಮೂಲಕ ಡ್ರೈಯರ್, ಹಿಟ್ಟು ಮಾಡುವ ಯಂತ್ರ, ಚಿಪ್ಸ್ ಮಾಡುವ ಯಂತ್ರದಂಥ ಅಗತ್ಯ ಉಪಕರಣಗಳನ್ನು ಮಾವಿನಕೊಪ್ಪ, ಶಮೇಮನೆ, ಕ್ಲಸ್ಟರ್ ಗಳಿಗೆ ಒದಗಿಸಲಾಗಿದೆ. ನೆಲಸರಿಯ ರೈತ ಸದಸ್ಯರು ಅದರಲ್ಲೂ ಮಹಿಳೆಯರು ಇವುಗಳ ಸದುಪಯೋಗ ಪಡೆದು ಆರ್ಥಿಕವಾಗಿ ಹೆಚ್ಚಿನ ಲಾಭಗಳಿಸಬೇಕು ಎಂದರು.

ಗೃಹ ಉದ್ದಿಮೆದಾರರಾದ ಶೃತಿ ಎಸ್. ಮಾವಿನಕೊಪ್ಪರವರು ಪ್ರಾತ್ಯಕ್ಷಿಕೆ ಮೂಲಕ ಕಾರ್ಯಕ್ರಮದಲ್ಲಿ ನೆರೆದಿದ್ದ 40ಕ್ಕೂ ಅಧಿಕ ಆಸಕ್ತರಿಗೆ ವೈವಿಧ್ಯಮಯ ಕೇಕ್, ಚಾಕೋಲೇಟ್, ಬಿಸ್ಕಿಟ್ ಮತ್ತಿತರ ಖಾದ್ಯಗಳನ್ನು ತಯಾರಿಸುವ ಕುರಿತು ವಿವರಿಸಿದರು. ಗೃಹ ಉದ್ದಿಮೆಯಾಗಿ ಕೇಕ್, ಚಾಕಲೇಟ್, ಬಿಸ್ಕತ್ ಮಾಡಿದಲ್ಲಿ ಯಾವ ರೀತಿ ಆದಾಯಗಳಿಸಬಹುದೆಂಬ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉ.ಕ.ಜಿಲ್ಲಾ ಸಾವಯವ ಕೃಷಿಕರ ಒಕ್ಕೂಟದ ಅಧ್ಯಕ್ಷ  ವಿಶ್ವೇಶ್ವರ ಭಟ್ಟ ಹೆಚ್ಚಿನ ಬಾಳಿಕೆ ಹೊಂದಿರುವ ಚಾಕಲೇಟ್, ಬಿಸ್ಕಿಟ್ ನಂಥ ಉತ್ಪನ್ನಗಳನ್ನು ಯೋಗ್ಯ ಗುಣಮಟ್ಟದೊಂದಿಗೆ ನಿರಂತರವಾಗಿ ಪೂರೈಸಿದಲ್ಲಿ ಮುಂದಿನ ದಿನಗಳಲ್ಲಿ ಕದಂಬ ಮಾರ್ಕೆಟಿಂಗ್ ಮತ್ತು ಉ.ಕ.ಜಿಲ್ಲಾ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಮೂಲಕ ಮಾರುಕಟ್ಟೆ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು. ನೆಲಸಿರಿಯ ಹಿರಿಯ ನಿರ್ದೇಶಕ ನಾರಾಯಣ ಗಡಿಕೈ ಆಹಾರ ಉದ್ದಿಮೆದಾರರಿಗೆ ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. 

300x250 AD

ಇಸಳೂರು ಗ್ರಾಮ ಪಂಚಾಯತ ಉಪಾಧ್ಯಕ್ಷ ಪ್ರಸನ್ನ ಹೆಗಡೆ ಹೊಳೆಬೈಲ್, ಸ್ಥಳೀಯ ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ಸಚ್ಚಿದಾನಂದ ಭಟ್ಟ ಹೆಬ್ಬಳ್ಳಿ, ನೆಲಸಿರಿ ನಿರ್ದೇಶಕರಾದ ಮಹಾದೇವ ಹೆಗಡೆ, ಸಚಿನ್ ಭಟ್ಟ ಅಚ್ಚನಳ್ಳಿ, ಕದಂಬ ನಿರ್ದೇಶಕರಾದ ಪ್ರತಿಭಾ ದೇವ್ ಹಾಗೂ ಆಶಾಲತಾ ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನೆಲಸಿರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಮಾವಿನಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೇಂದ್ರ ಸರ್ಕಾರದ PMFME ಯೋಜನೆಯಡಿ ನೆಲಸಿರಿ ರೈತ ಉತ್ಪಾದಕ ಕಂಪನಿಯು ಅಡಿಕೆ ಸಂಸ್ಕರಣಾ ಘಟಕ ಸ್ಥಾಪಿಸಲು ನಿರ್ಧರಿಸಿದ್ದು ಇದರ ಭಾಗವಾದ ಚಾಲಿ ಅಡಿಕೆ ಸುಲಿಯುವ ಯಂತ್ರದ ಉದ್ಘಾಟನೆಯನ್ನೂ ಇದೇ ಸಂದರ್ಭದಲ್ಲಿ ನೆರವೇರಿಸಲಾಯಿತು. 

Share This
300x250 AD
300x250 AD
300x250 AD
Back to top