ಶಿರಸಿ: ಮಕ್ಕಳು ಮನೆಯಲ್ಲಿ ಸಂಸ್ಕಾರ ಕಲಿತರೆ ಮಾತ್ರ ಶಾಲೆಯಲ್ಲಿ ಶಿಕ್ಷಣ ಕಲಿತು ಭವಿಷ್ಯ ರೂಪಿಸಿಕೊಳ್ಳುತ್ತಾರೆಂದು ಹಿರಿಯ ಸಾಹಿತಿ ಗಣಪತಿ ಭಟ್ಟ ವರ್ಗಾಸರ ಹೇಳಿದರು.
ಅವರು ಗುರುವಾರ ಅಂಬೇಡ್ಕರ್ ಭವನದಲ್ಲಿ ಸಹಾಯ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಸ್ತೂರಬಾ ನಗರದ ಲಿಟ್ಲಪ್ಲವರ್ ಸ್ಕೂಲ್‌ನ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ ಮತ್ತು ತಾಯಿಯೇ ಮಗುವಿಗೆ ಮೊದಲ ಗುರು.ಗುರು ಸ್ಥಾನದಲ್ಲಿರುವ ತಾಯಿ ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡಿದರೇ ಮಾತ್ರ ಅವರು ಮುಂದೆ ಸಮಾಜಕ್ಕೆ ಹಿತವಾಗುವ ರೀತಿಯಲ್ಲಿ ಬದುಕುತ್ತಾರೆ. ಮಕ್ಕಳ ಶಿಕ್ಷಣ ತಮ್ಮ ಕುಟುಂಬಕ್ಕೆ ಸೀಮಿತವಾಗದೇ ಸಮಾಜಕ್ಕೆ ಉಪಕಾರವಾಗುವಂತಿರಬೇಕು. ತಾನು ಕಲಿತ ಶಿಕ್ಷಣ ಇನ್ನೊಬ್ಬರಿಗೆ ಉಪಯೋಗವಾದಾಗ ಮಾತ್ರ ಕಲಿತ ಶಿಕ್ಷಣಕ್ಕೆ ನಿಜವಾದ ಬೆಲೆ ಬಂದಂತಾಗುತ್ತದೆ ಎಂದರು.
ಸಹಾಯ ಟ್ರಸ್ಟ್ ಅಧ್ಯಕ್ಷ ಸತೀಶ ಶೆಟ್ಟಿ ಮಾತನಾಡಿ, ಯಾವುದೇ ಶಾಲೆಯಾಗಲಿ ಆ ಶಾಲೆಯಲ್ಲಿ ಕಲಿತ ಮಕ್ಕಳು ಭವಿಷ್ಯ ರೂಪಿಸಿಕೊಂಡಾಗ ಮಾತ್ರ ಕಟ್ಟಿದ ಶಾಲೆ ಸಾರ್ಥಕವಾದಂತಾಗುತ್ತದೆ. ಶಾಲೆ ಬೆಳೆಸುವುದು ಕೇವಲ ಆಡಳಿತ ಮಂಡಳಿಗೆ ಸೇರಿಲ್ಲ. ಪಾಲಕರು ಹಾಗೂ ದಾನಿಗಳು ಶಾಲೆಯ ಬಗ್ಗೆ ಗೌರವ ಮನೋಭಾವನೆ ಹೊಂದಿದ್ದರೆ ಮಾತ್ರ ಶಾಲೆ ಅಭಿವೃದ್ಧಿ ಹೊಂದಿ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡಲು ಸಾದ್ಯವಾಗುತ್ತದೆ. ಇಲ್ಲಿ ಕಲಿತಂತ ವಿದ್ಯಾರ್ಥಿಗಳು ಬೇರೆ ಬೇರೆ ಕಡೆಗಳಲ್ಲಿ ಉನ್ನತ ಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ಈ ಮಕ್ಕಳು ತಾವು ಕಲಿತ ಶಾಲೆಗಳತ್ತ ಒಮ್ಮೆ ತಿರುಗಿ ನೋಡುವತ್ತ ಪರಿಪಾಠ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ವೇದಿಕೆಯಿಂದ ಮುಖ್ಯ ಶಿಕ್ಷಕಿ ಸರೋಜ ನಾಯ್ಕ, ಪಾಲಕರ ಪ್ರತಿನಿಧಿಯಾಗಿ ಸುಧಾರಾಣಿ ಚಂದಾವರ ಮುಂತಾದವರು ಇದ್ದರು.