ಸಿದ್ದಾಪುರ: ಜ.15ರಂದು ಶಿರ್ಸಿಯಲ್ಲಿ ವಿಧಾನಸಭಾಧ್ಯಕ್ಷರು, ಸ್ಥಳೀಯ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸಾರ್ವಜನಿಕವಾಗಿ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಆದರೆ ಯಾವ ಕಾರಣಕ್ಕೆ ಅವರಿಗೆ ಅಭಿನಂದನೆ ಸಲ್ಲಿಸಲು ಸಂಘಟಕರು ಹೊರಟಿದ್ದಾರೆ ಎನ್ನುವುದು ತಿಳಿದಿಲ್ಲ. ಅವರು ತಿಳಿಸಿರುವ ಮಾಹಿತಿ ಪ್ರಕಾರ ಸನ್ಮಾನಿಸುವುದಾದರೆ ಇವರು ಅದಕ್ಕೆ ಯೋಗ್ಯ ಶಾಸಕರಲ್ಲ ಎಂದು ಆಮ್ ಆದ್ಮಿ ಜಿಲ್ಲಾ ಉಪಾಧ್ಯಕ್ಷ ವೀರಭದ್ರ ನಾಯ್ಕ ಹೇಳಿದರು.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮೂರು ಬಾರಿ ಅಂಕೋಲಾ ಕ್ಷೇತ್ರದಿಂದ ಹಾಗೂ ಮೂರು ಬಾರಿ ಶಿರಸಿ- ಸಿದ್ದಾಪುರ ಕ್ಷೇತ್ರದಿಂದ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಆಗಿದ್ದಾರೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆರು ಬಾರಿ ಶಾಸಕರಾಗಿ, ಸಚಿವರಾಗಿ ಸಭಾಧ್ಯಕ್ಷರಾಗಿದ್ದಾರೆ. ಅವರು ತಾನೊಬ್ಬ ಕಳಂಕ ರಹಿತ ರಾಜಕಾರಣಿ ಎಂದು ಹೇಳಿದ್ದಾರೆ. ಕಳೆದ ಬಾರಿ ಕಾಮಗಾರಿ ಆದೇಶ ನೀಡಬೇಕಾದರೆ ಶಾಸಕರಿಗೆ ಕೊಡಬೇಕೆಂದು ಅಧಿಕಾರಿಗಳು ಪರ್ಸೆಂಟೇಜ್ ತೆಗೆದುಕೊಂಡೆ ಕಾಮಗಾರಿ ಆದೇಶ ನೀಡಿದ್ದಾರೆ. ಈ ಕುರಿತು ಹಲವಾರು ಗುತ್ತಿಗೆದಾರರು ಪರ್ಸೆಂಟೇಜ್ ಕೊಟ್ಟಿದ್ದೇವೆ, ಅಡ್ಜಸ್ಟ್ಮೆಂಟ್ ಮಾಡಿಕೊಂಡಿದ್ದೇವೆಂದು ನಮ್ಮಲ್ಲಿ ಹೇಳಿದ್ದಾರೆ ಎಂದು ಆರೋಪಿಸಿದರು.
ಶಾಸಕರಿಗೆ, ಅಧಿಕಾರಿಗಳಿಗೆ ಪರ್ಸೆಂಟೇಜ್ ಕೊಟ್ಟು ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ. ಕಳಪೆ ಕಾಮಗಾರಿಗೆ ಪರ್ಸೆಂಟೇಜ್ ನೀಡಿರುವುದೇ ಕಾರಣವಾಗಿದೆ ಎಂಬ ಅರ್ಥವನ್ನು ಮೂಡಿಸುತ್ತಿದೆ. ಕಾಗೇರಿಯವರು ತಮ್ಮದು ದ್ವೇಷ ರಾಜಕಾರಣವಲ್ಲ ಎಂದು ಹೇಳುತ್ತಾರೆ. ಆದರೆ ಬಿಜೆಪಿಯ ಕಾರ್ಯಕರ್ತರಾದ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಹರೀಶ್ ಗೌಡರ್ ಸಾರ್ವಜನಿಕವಾಗಿ ಕಾಗೇರಿ ಅವರ ಕೆಲವು ನಡತೆ ಬಗ್ಗೆ ಧ್ವನಿ ಎತ್ತಿದಾಗ ಹಾಗೂ ಚುನಾವಣೆ ವೇಳೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸುವಲ್ಲಿ ಕಾಗೇರಿಯವರು ಸರಿಯಾಗಿ ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದಾಗ ಅವರನ್ನು ಹುದ್ದೆಯಿಂದ ತೆಗೆದು ಹಾಕಿದರು. ಹರೀಶ್ ಗೌಡರ್‌ನನ್ನ ಕರೆಯಿಸಿ ಬುದ್ಧಿವಾದ ಹೇಳಿ ರಾಜಿ ಮಾಡಿ ಸರಿ ಮಾಡಬಹುದಿತ್ತು. ಆದರೆ ಹಾಗೆ ಮಾಡದೆ ತಮ್ಮ ಪ್ರಭಾವ ಬಳಸಿ ಆತನನ್ನು ಜೈಲಿಗಟ್ಟಿದರು ಎಂದು ಆರೋಪಿಸಿದರು.
ಹರೀಶ್ ಗೌಡರವರು ತಾಲೂಕಿನ ಹಂಜಕ್ಕಿ ರಸ್ತೆ ಜನ ಜಾನುವಾರು ಓಡಾಡಲಿಕ್ಕೆ ಯೋಗ್ಯವಾಗಿಲ್ಲ, ಇಲ್ಲಿ ಗದ್ದೆ ನಾಟಿ ಮಾಡಲು ಜನ ಬೇಕಾಗಿದ್ದಾರೆ ಎಂದು ವಾಟ್ಸಪ್, ಫೇಸ್ಬುಕ್‌ಗಳಲ್ಲಿ ಹಾಕಿದ್ದರು. ವಸ್ತುಸ್ಥಿತಿಯನ್ನು ಪ್ರಕಟಿಸಿದರೆ ಅದರಲ್ಲಿ ತಪ್ಪೇನಿದೆ? ಪ್ರಧಾನಮಂತ್ರಿ, ಮುಖ್ಯಮಂತ್ರಿಗಳನ್ನೇ ನಿಂದಿಸುತ್ತಾರೆ, ಅದರಲ್ಲಿ ತಪ್ಪೇನಿದೆ? ವಾಟ್ಸಪ್ ಹಾಗೂ ಫೇಸ್ಬುಕ್‌ಗಳಲ್ಲಿ ಕಾಗೇರಿಯವರ ಭಾವಚಿತ್ರದೊಂದಿಗೆ ಗದ್ದೆ ನಾಟಿ ಮಾಡಲು ಜನ ಬೇಕಾಗಿದ್ದಾರೆ ಎಂದು ಹಾಕಿದ್ದಕ್ಕೆ ಇವರ ಮೇಲೆ ಪ್ರಕರಣ ದಾಖಲಾಗುವಂತೆ ನೋಡಿಕೊಂಡು ಇವರನ್ನು ಜೈಲಿಗೆಟ್ಟಿದರು ಎಂದು ಹೇಳಿದರು.
ಬಿಜೆಪಿ ಯುವಮೋರ್ಚಾ ನಿಕಟಪೂರ್ವ ತಾಲೂಕಾಧ್ಯಕ್ಷ ಹರೀಶ್ ಗೌಡರ್ ಮಾತನಾಡಿ, ಶಾಲಾ ಅಂಗನವಾಡಿಗಳ ಅಭಿವೃದ್ಧಿಗೆ ವೈಯಕ್ತಿಕವಾಗಿ ಸಹಕರಿಸದ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹ ಹಣ ನೀಡದ ಇಂತಹ ವ್ಯಕ್ತಿಗೆ ಅಭಿನಂದನೆ ಮಾಡುವುದಕ್ಕಿಂತ ಅರಣ್ಯ ಅತಿಕ್ರಮಣದಾರರ ಪರವಾಗಿ ಹೋರಾಟ ಮಾಡುತ್ತಿರುವಂತಹ, ಶಿರಸಿ ಜಿಲ್ಲೆ ಮಾಡುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿರುವ, ಶಾಲಾ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಣೆ ಮಾಡಿ ಶೈಕ್ಷಣಿಕ ಸಹಾಯ ನೀಡುತ್ತಿರುವ, ಕೊರೋನಾ ಸಮಯದಲ್ಲಿ ವೈಯಕ್ತಿಕ ಹಣದಿಂದ ಆಹಾರ ಕಿಟ್ ವಿತರಣೆ ಮಾಡಿದವರಿದ್ದಾರೆ, ಅಂಥವರಿಗೆ ಬೇಕಾದರೆ ಸನ್ಮಾನ ಮಾಡಲಿ. ನಮ್ಮ ಹೆಮ್ಮೆ ನಮ್ಮ ಕಾಗೇರಿ ಎಂಬ ಇವರು ಮಾಡುತ್ತಿರುವಂತಹ ಕಾರ್ಯಕ್ರಮ ಸರಳ ಸಜ್ಜನ ಎಂಬ ಹೆಸರಿಗೆ ಕಳಂಕವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಆಮ್ ಆದ್ಮಿ ತಾಲೂಕು ಅಧ್ಯಕ್ಷ ಲಕ್ಷಣ ನಾಯ್ಕ್, ಆಕಾಶ್ ಕೊಂಡ್ಲಿ ಇದ್ದರು.
ವಿಶ್ವೇಶ್ವರ ಹೆಗಡೆ ಕಾಗೇರಿಯವರು ನುಡಿದಂತೆ ನಡೆಯುತ್ತಾರೆ ಎಂದು ಹೇಳುತ್ತಾರೆ. ಕಾಗೇರಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹುಸಂಖ್ಯಾತ ಈಡಿಗರು ಭೀಮಣ್ಣನ ಪರವಾಗಿದ್ದಾರೆ ಎಂದು ಪ್ಲಾನಿಂಗ್ ಮಾಡಿ ಈಡಿಗರ ಮತವನ್ನು ಪಡೆಯುವ ನಿಟ್ಟಿನಲ್ಲಿ ತಾನು ಆಯ್ಕೆಯಾದಲ್ಲಿ ಈಡಿಗ ಸಮಾಜದವರನ್ನು ಎಂಎಲ್ಸಿ ಮಾಡುತ್ತೇನೆ ಎಂದು ಮಾತು ಕೊಟ್ಟರು. ಆದರೆ ಈವರೆಗೂ ಯಾಕೆ ಮಾಡಿಲ್ಲ? ಬಾನ್ಕುಳಿ ಮಠದ ಪಶುಗಳಿಗೆ ಆಹಾರ ಸಮಸ್ಯೆ ಉದ್ಭವಿಸಿದಾಗ ನಾನು ಕೂಡ ಭಾನ್ಕುಳಿ ಮಠಕ್ಕೆ ಭೇಟಿ ನೀಡಿ ಪಶುಗಳಿಗೆ ಆಹಾರ ನೀಡಿ ಬಂದಿದ್ದೇನೆ. ಯಾಕೆಂದರೆ ಪಶುಗಳಿಗೆ ಜಾತಿ ಇಲ್ಲ. ನಮ್ಮೂರಿನ ದೇವಸ್ಥಾನಕ್ಕೆ ನಿಮ್ಮ ಬಿಜೆಪಿ ಕಾರ್ಯಕರ್ತರು ಅಧ್ಯಕ್ಷರಿದ್ದಾಗ 5 ಲಕ್ಷ ರೂಪಾಯಿ ಹಣವನ್ನು ಶಾಸಕರ ನಿಧಿಯಿಂದ ನೀಡಿದ್ದೀರಿ. ಗ್ರಾಮಸ್ಥರ ಕೋರಿಕೆಯಂತೆ ನಾನು ದೇವಸ್ಥಾನದ ಅಧ್ಯಕ್ಷನಾಗುತ್ತಿದ್ದಂತೆ 5 ಲಕ್ಷ ಅನುದಾನವನ್ನು ವಾಪಸ್ ಪಡೆದುಕೊಂಡಿದ್ದೀರಿ. ಇದು ದ್ವೇಷದ ರಾಜಕಾರಣವಲ್ಲವೇ ಎಂದು ವೀರಭದ್ರ ನಾಯ್ಕ ಪ್ರಶ್ನೆ ಎತ್ತಿದ್ದಾರೆ.
ಕಳಂಕಗಳನ್ನು ಹೊತ್ತಿಕೊಂಡಿರುವ ಕಾಗೇರಿ
ಸ್ಥಳೀಯ ಶಾಸಕರಾದ ಕಾಗೇರಿಯವರು ಯಾರಿಗೂ ವೈಯಕ್ತಿಕವಾಗಿ ಹತ್ತು ರೂಪಾಯಿಯನ್ನು ಸಹ ಕೊಟ್ಟಿಲ್ಲ. ದೇವಸ್ಥಾನ ಹಾಗೂ ಕ್ರೀಡಾಕೂಟಗಳಿಗೂ ಸಹ ವೈಯಕ್ತಿಕವಾಗಿ ಹಣ ನೀಡಿಲ್ಲ. ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಸರ್ಕಾರದ ಅನುದಾನದ ಹಣ ಬರುತ್ತೆ ಹೋಗುತ್ತೆ. ಸರ್ಕಾರದ ಅನುದಾನದ ಹಣದಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಗತಿ ಆಗುತ್ತಿದೆ. ಆದರೆ ಸಿದ್ದಾಪುರದಲ್ಲಿ ಸಾಕಷ್ಟು ಕಾಮಗಾರಿಗಳು ಕಳಪೆಯಾಗಿದೆ. ಇಷ್ಟೊಂದು ಕಳಂಕಗಳನ್ನು ಹೊತ್ತಿಕೊಂಡಿರುವ ಕಾಗೇರಿಯವರನ್ನು ಪ್ರಾಮಾಣಿಕರು ಅಂತ ಯಾವ ರೀತಿ ಗೌರವಿಸುತ್ತಾರೋ ನನಗಂತೂ ಅರ್ಥವಾಗುತ್ತಿಲ್ಲ