ಶಿರಸಿ: ರಾಜ್ಯದ ಪ್ರಸಿದ್ಧ ಸಾಹಿತಿ ಬಿ.ಎಚ್. ಶ್ರೀಧರರ ಹೆಸರಿನಲ್ಲಿ ನೀಡಲಾಗುತ್ತಿರುವ ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿಗೆ ಕವಿ ಕಮಲಾಕರ ಕಡವೆ ಆಯ್ಕೆಯಾಗಿದ್ದಾರೆ.
ಡಾ.ಎಂ.ಜಿ.ಹೆಗಡೆಯವರಿರುವ ಆಯ್ಕೆ ಸಮಿತಿಯು ಇವರ ಕಾವ್ಯ ಸೃಷ್ಟಿಯ ವಿಶೇಷತೆಯನ್ನು ಗಮನಿಸಿ ಆಯ್ಕೆ ಮಾಡಿದೆ. ಕಮಲಾಕರ, ಶಿರಸಿಯ ಕಡವೆ ಗ್ರಾಮದಲ್ಲಿ ಜನಿಸಿ, ಶಿರಸಿ, ಮೈಸೂರು, ಹಾಗೂ ಪುಣೆಯಲ್ಲಿ ಶಿಕ್ಷಣ ಪಡೆದರು, ಈಗ ಮಹಾರಾಷ್ಟ್ರದ ಅಹಮದ ನಗರದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮೊದಲ ಕವನ ಸಂಕಲನ ಚೂರು ಪಾರು ರೇಶಿಮೆಗೆ 2006ರಲ್ಲಿ ಪು.ತಿ.ನ. ಪ್ರಶಸ್ತಿ ದೊರಕಿದೆ. ಮುಗಿಯದ ಮಧ್ಯಾಹ್ನ ಜಗದ ಜತೆ ಮಾತುಕತೆ ಕವನ ಸಂಕಲನಗಳು ಪ್ರಕಟವಾಗಿವೆ. ಭಾರತೀಯ ನೂರು ಕವಿತೆಗೆ ಅನುದಾನಗಳಿದ್ದು ಅಕ್ಕ- ಪಕ್ಕದ ಪಾತರಗಿತ್ತಿ, ಕುವೆಂಪು ವಿ.ವಿ. ಪ್ರಕಟಿಸಿದೆ,ಅಂತರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
ಈ ಪ್ರಶಸ್ತಿಯು ಐದು ಸಾವಿರ ನಗದು ಹಣ, ಪ್ರಶಸ್ತಿ ಫಲಕ, ನೆನಪಿನ ಕಾಣಿಕೆಗಳನ್ನೊಳಗೊಂಡಿದ್ದು, ಬಿ.ಎಚ್.ಶ್ರೀಧರರ ಜನ್ಮ ದಿನ ಏಪ್ರಿಲ್ 24ರಂದು ಪ್ರದಾನ ಮಾಡಲಾಗುವುದೆಂದು ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ್ ತಿಳಿಸಿದ್ದಾರೆ.