ಅಂಕೋಲಾ: ತಾಲೂಕಿನ ಬೆರಡೆ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯೋರ್ವರ ಮೃತದೇಹವನ್ನ ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲದ ಕಾರಣ ಮೂರು ಕಿ.ಮೀ.ವರೆಗೆ ಜೋಲಿಯಂತೆ ಕಟ್ಟಿಕೊಂಡು ಹೊತ್ತೊಯ್ದಿರುವ ಘಟನೆ ನಡೆದಿದೆ.
ಗ್ರಾಮದ ಬೇರಡಿಯ ದಾಮೋದರ ನಾಯ್ಕ (70) ಮಂಗಳವಾರ ತಮ್ಮ ಮನೆಯ ಪಕ್ಕದ ಜಮೀನಿನಲ್ಲಿ ಬಿದ್ದ ಬೆಂಕಿಯನ್ನು ಆರಿಸಲು ಹೋಗಿ ಬೆಂಕಿ ತಗುಲಿ ಮೃತಪಟ್ಟಿದ್ದರು. ಮೃತದೇಹವನ್ನ ಸ್ಮಶಾನಕ್ಕೆ ಕೊಂಡೊಯ್ಯಲು ಯಾವುದೇ ರಸ್ತೆ ಸಂಪರ್ಕ ಇಲ್ಲದೆ ಕಾಲು ದಾರಿಯಲ್ಲಿ ಶವವನ್ನ ಜೋಲಿಯಂತೆ ಕಟ್ಟಿಕೊಂಡು ಸ್ಥಳೀಯ ಯುವಕರೇ ಹೊತ್ತು ಮೂರು ಕಿ.ಮೀ. ಸಾಗಿದ್ದಾರೆ.
ಈ ಕುರಿತು ಸ್ಥಳೀಯರಾದ ರಾಮಕೃಷ್ಣ ಗುನಗಾರವರು ಆಕ್ರೋಶ ವ್ಯಕ್ತಪಡಿಸಿ ವಿಡಿಯೋ ಮಾಡಿದ್ದು, ಹಲವಾರು ಭಾರಿ ನಾವು ಈ ಬಾಗಕ್ಕೆ ರಸ್ತೆ ನಿರ್ಮಾಣಕ್ಕೆ ಒತಾಯಿಸಿದ್ದೇವೆ. ಯಾವೊಬ್ಬ ಜನಪ್ರತಿನಿಧಿಗಳು ಇಲ್ಲಿ ಕಣ್ಣೆತ್ತಿ ನೋಡಿಲ್ಲ, ಜಿಲ್ಲಾಡಳಿತವು ಕಣ್ಮುಚ್ಚಿ ಕುಳಿತಿದೆ. ಸ್ಥಳೀಯ ಶಾಸಕಿ ರೂಪಾಲಿ ನಾಯ್ಕರವರು ಈವರೆಗೆ ಯಾವುದೇ ಸಮಸ್ಯೆ ಪರಿಹರಿಸಿಲ್ಲ. ಇನ್ನಾದರೂ ಈ ಸಮಸ್ಯೆ ಬಗೆಹರಿಸಿ ಗ್ರಾಮಕ್ಕೆ ರಸ್ತೆ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.