ಕಾರವಾರ: ಸರ್ಕಾರಗಳ ನಿಷೇಧದ ಆದೇಶದ ನಡುವೆಯೂ ಲೈಟ್ ಫಿಶಿಂಗ್ ಅವ್ಯಾಹತವಾಗಿ ಮುಂದುವರಿದಿದ್ದು, ಅಧಿಕಾರಿಗಳು ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಭಟ್ಕಳದಿಂದ ಕಾರವಾರದವರೆಗಿನ ಕರಾವಳಿಯ ಮೀನುಗಾರರು ಜಿಲ್ಲಾಧಿಕಾರಿ ಕಚೇರಿಯೆದುರು ಸೇರಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯೆದುರು ಸೇರಿದ 500ಕ್ಕೂ ಅಧಿಕ ಮೀನುಗಾರರು, ಲೈಟ್ ಫಿಶಿಂಗ್ ನಡೆಸುವವರ ವಿರುದ್ಧ ಹಾಗೂ ಲೈಟ್ ಫಿಶಿಂಗ್ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬೆಳಕು ಮೀನುಗಾರಿಕೆಯಿಂದ ನಾಡದೋಣಿ ಒಳಗೊಂಡು ಸಾಂಪ್ರದಾಯಿಕ ಮೀನುಗಾರಿಕೆಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರೂ, ಈವರೆಗೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ತಮ್ಮ ಮೇಲೆ ಭರವಸೆಯೇ ಇಲ್ಲ ಎಂದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕೆಂದು ಆಗ್ರಹಿಸಿದರು. ತಾಸುಗಳ ಕಾಲ ನಡೆದ ಪ್ರತಿಭಟನೆಯ ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಮನವಿ ಸ್ವೀಕರಿಸಿದರು. ಈ ವೇಳೆ ಬೆಳಕು ಮೀನುಗಾರಿಕೆ ಹಾಗೂ ಬುಲ್ ಟ್ರಾಲ್ ಮೀನುಗಾರಿಕೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಮೀನುಗಾರರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಮೊಟಕುಗೊಳಿಸಲಾಯಿತು.
ಮೀನುಗಾರರಾದ ಆನಂದ ಹರಿಕಂತ್ರ, ಪವಿತ್ರಾ ಮೇಸ್ತ, ರಮೇಶ ಮಾಜಾಳಿ, ಯಮುನಾ ಹೊಲನಗದ್ದೆ, ಸುಜಾತಾ ಹರಿಕಂತ್ರ, ಕುಸುಮ ಹರಿಕಂತ್ರ, ದೇವರಾಯ ಸೈಲ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.