ಕಾರವಾರ: ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಉಪಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ, ಎಸ್‌ಸಿ, ಎಸ್‌ಟಿ, ಓಬಿಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ ಸೇರಿದಂತೆ ಒಟ್ಟು 12 ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್.ಫಕೀರಪ್ಪ ಹೊಸ್ಮನಿ, ಭಾರತದಲ್ಲಿ ಹಲವಾರು ಜಾತಿಗಳಿವೆ. ಆದರೆ ಎಲ್ಲಾ ಜಾತಿಗಳಲ್ಲಿನ ಅಸಮಾನತೆ ಹೋಗಲಾಡಿಸಿ ಸಮಾನತೆ ತರಬೇಕೆಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಾಗಿತ್ತು. ಈ ದೇಶದಲ್ಲಿರುವ ಭೂಮಿ, ಬಂಡವಾಳ, ಅಧಿಕಾರ, ಸಂಪತ್ತು ಈ ದೇಶದಲ್ಲಿರುವ ಎಲ್ಲಾ ಜನರಿಗೂ ಸಮನಾಗಿ ಹಂಚಿಕೆಯಾದಾಗ ಮಾತ್ರ ಎಲ್ಲರಿಗೂ ಸಮಾನತೆ ಸಿಗುತ್ತದೆಂದು ಅವರು ಹೇಳಿದ್ದರು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅತೀ ದುರ್ಬಲ ಪರಿಶಿಷ್ಟ ಜಾತಿಗಳು ಅವಕ್ಕಿಂತ ಒಂದಿಷ್ಟು ಸಬಲರಾದ ಪರಿಶಿಷ್ಟ ಜಾತಿಗಳೊಂದಿಗೆ ಸ್ಪರ್ಧಿಸಿ ಮೀಸಲಾತಿ ಅವಕಾಶ ಪಡೆಯಲಾಗದೆ ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯಗಳಾಗಿವೆ ಎಂದರು.
ಹೀಗಾಗಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಉಪಜಾತಿಗಳಿಗೆ ಆಯಾ ಉಪಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಯಾಗಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಜನಪರ ಸಂಘಟನೆಗಳಲ್ಲಾ ಕಳೆದ 30 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಆಳುವ ಸರ್ಕಾರಗಳು ಒಳಮೀಸಲಾತಿಯನ್ನು ಜಾರಿಗೆ ತರದೆ ಅನ್ಯಾಯ ಮಾಡುತ್ತಿವೆ. ಹೀಗಾಗಿ ಈ ಕೂಡಲೇ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿಯನ್ನು ಜಾರಿಗೆ ತರಬೇಕು. ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಎಸ್‌ಸಿ, ಎಸ್‌ಟಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿರುವ ಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು. ಸರ್ಕಾರಿ ಸೌಲಭ್ಯ ಪಡೆಯಲು ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದಿರುವುದನ್ನು ರದ್ದುಪಡಿಸಿ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂಬಿತ್ಯಾದಿ ಒಟ್ಟು 12 ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದ್ದು, ಸರ್ಕಾರ ಶೀಘ್ರವೇ ಇವುಗಳನ್ನ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಕೆ.ಶಿವಾನಂದ, ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜುನಾಥ ಹಳ್ಳೇರ್, ಆಂಜನೇಯ ವಡ್ಡರ್, ಹಳಿಯಾಳ ತಾಲೂಕಾಧ್ಯಕ್ಷ ಅಶೋಕ ಮೇತ್ರಿ, ಹೊನ್ನಾವರ ತಾಲೂಕಾಧ್ಯಕ್ಷ ಪ್ರಭು ಹಳ್ಳೇರ್, ಪರಶುರಾಮ ಸೂರ್ನಾಯಕ್, ಲಕ್ಷ್ಮಣ್, ಮಹಿಳಾ ಅಧ್ಯಕ್ಷೆ ಮಾದೇವಿ ಹಳ್ಳೇರ್ ಮುಂತಾದವರಿದ್ದರು.