Slide
Slide
Slide
previous arrow
next arrow

ಅನ್ವೇಷಣಾ–2023 ಉದ್ಘಾಟನೆ: ಜ್ಞಾನದ ಹಸಿವು ಬದುಕನ್ನು ಬೆಳಗಲಿದೆ : ಜೀ.ಯು

300x250 AD

ಕುಮಟಾ : ತಾಲೂಕಿನ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ ಟ್ರಸ್ಟ ಹಾಗೂ ವಿಧಾತ್ರಿ ಅಕಾಡೆಮಿ ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ  ಮನೋಭಾವನೆ ಬೆಳೆಸುವ ಹಾಗೂ ಪುಸ್ತಕದ ಕುರಿತ ಆಸಕ್ತಿ ಹೆಚ್ಚಿಸಲು ಹಮ್ಮಿಕೊಂಡ “ಅನ್ವೇಷಣಾ – 2023” ಕಾರ್ಯಕ್ರಮವು
ಬಿ.ಕೆ. ಭಂಡಾರ್ಕಸ್ ಸರಸ್ವತಿ ಪದವಿ ಪೂರ್ವ ಕಾಲೆಜಿನಲ್ಲಿ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು . ಮೂರು ದಿನಗಳ ಕಾಲ ನಡೆಯಲಿರುವ
ಈ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ, ನಾಟಕಕಾರ, ನಿರ್ದೆಶಕ ಜೀ.ಯು ಭಟ್ಟ ಹೊನ್ನಾವರ ದೀಪ ಬೆಳಗುವ ಮೂಲಕ ವಿದ್ಯುಕ್ತವಾಗಿ ಕಾರ್ಯಕ್ರಮ ಉದ್ಘಾಟಿಸಿದರು.
             ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನದ ಹಸಿವು ಮಾತ್ರವೇ ಬದುಕನ್ನು ಬೆಳಗಲಿದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಇಂದಿನ ಸಮಾಜದ ಅವಶ್ಯಕತೆಯಾಗಿದ್ದು, ಈ ಕಾರ್ಯಕ್ರಮ ವಿದ್ಯಾರ್ಥಿಗಳ ಬದುಕನ್ನು ಅರಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಹೊರಗಿನ ದೀಪ ಬೆಳಗಿಸಲು ಯಾರಾದರು ಆದೀತು . ಆದರೆ ಒಳಗಿನ ದೀಪ ಬೆಳಗಿಸಲು ಇಂತಹ ಶಿಕ್ಷಣ ಸಂಸ್ಥೆಗಳ ಅಗತ್ಯತೆ ಇದೆ. ಕೊಂಕಣ ಎಜ್ಯುಕೇಶನ್ ಅತ್ಯಂತ ಸುಂದರವಾಗಿ ಕಾರ್ಯಕ್ರಮ ಸಂಯೋಜಿಸುವ ಜೊತೆಗೆ ವಿಧಾತ್ರಿ ಅಕಾಡೆಮಿಯ ಜೊತೆ ಜೊತೆಯಾಗಿ ಸಾಧನೆಯ ಶಿಖರವನ್ನು ಏರುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಸಿದ್ಧಗಂಗಾ ಶ್ರಿಗಳ ಕವನವನ್ನು ವಾಚಿಸುವ ಮೂಲಕ ವಿದ್ಯಾರ್ಥಿಗಳಾದವರು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದರು. ಪರೀಕ್ಷೆಗಷ್ಟೇ ಶಿಕ್ಷಣ ಎಂಬುದಲ್ಲ ಮಾನವನ ಕರ್ತವ್ಯ ಜಾಗೃತ ಮಾಡಲು ಶಿಕ್ಷಣ ಬೇಕಿದೆ. ಅಂತಹ ಉತ್ತಮ ಪ್ರಜೆಗಳು ಮುಂದಿನ ದೇಶ ಕಟ್ಟುವಂತಾದರೆ ದೇಶ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಅತಿಥಿಗಳಾಗಿ ಹಾಜರಿದ್ದ ಖ್ಯಾತ ನ್ಯಾಯವಾದಿ ನಾಗರಾಜ ನಾಯಕ ಮಾತನಾಡಿ, ಕಲಿತ ವಿದ್ಯೆ, ವಿದ್ವತ್ತು ಜೀವನದ ಹಂತ ಹಂತಗಳಲ್ಲಿ ಅನುಸರಣೆ ಆಗಬೇಕು. ಕಲಿತಿದ್ದನ್ನು ಬಳಸಿ ಬದುಕುವ ಕಲೆ ರೂಢಿಯಾಗಬೇಕು. ಕೇವಲ ಒಂದೇ ದೃಷ್ಟಿಕೋನದಿಂದ ಓದುವುದಲ್ಲ ಏಲ್ಲಾ ವಿಧದ ಹಾಗೂ ವಿವಿಧ ಪುಸ್ತಕಗಳ ಓದು ಬದುಕಿಗೆ ಭದ್ರವಾದ ನೆಲೆ ನೀಡಬಲ್ಲದು ಎಂದರು. ವಕೀಲನಾಗಿ ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಏನಾದರೂ ಆಗು ಮೊದಲು ಮಾನವನಾಗು ಎಂಬುದನ್ನು ನಾವು ಅರಿತು ನಡೆಯಬೇಕು. ನಾವು ಬೆಳೆದು ಇತರರನ್ನು ಬೆಳೆಸುವ ಮನೋಧೋರಣೆ ಎಲ್ಲರಲ್ಲಿ ಅಗತ್ಯ ಎನ್ನುತ್ತಾ ವಿಜ್ಞಾನ ಪ್ರಯೋಗಗಳು ಹಾಗೂ ವಿದ್ಯಾರ್ಥಿಗಳ ಆ ಗುಣಮಟ್ಟದ ವಿವರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ಮಾತನ್ನಾಡಿದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಮುರಳೀಧರ ಪ್ರಭು ಎಲ್ಲೆಡೆ ವಿಜ್ಞಾನ ಮೇಳ ಕೇವಲ ನೋಡುವುದು ಹಾಗೂ ತಿಳಿಯುವುದು ಅಷ್ಟಕ್ಕೇ ಸೀಮಿತ ಆದರೆ ನಮ್ಮಲ್ಲಿ ಅದಕ್ಕಿಂತ ಮುಂದುವರೆದು ತಿಳಿದಿದ್ದನ್ನು ಗುಂಪುಗಳಾಗಿ ಪುನರಾವರ್ತಿಸುವ, ಚಟುವಟಿಕೆ ಮೂಲಕ ಮನನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ಕೇವಲ ಅಂಕಗಳಿಗೆ ಮಾತ್ರವೇ ಓದು ಎಂಬಂತಾಗಿದೆ ಅದು ದೂರಾವಗಬೇಕು ಬದುಕಿಗಾಗಿ ಓದುವವರ ಅಗತ್ಯತೆ ಇದೆ ಎಂದರು.
ಸರಸ್ವತಿ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಕಿರಣ ಹೆಗಡೆ ಸಂಸ್ಥೆಯ ಸಾಧನೆಯ ಜೊತೆಗೆ ಕಾರ್ಯಕ್ರಮದ ಬಗ್ಗೆ ವಿವರಿಸಿ ಸರ್ವರನ್ನು ಸ್ವಾಗತಿಸಿದರು. ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ವೇದಿಕೆಯಲ್ಲಿದ್ದರು. ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸ್ವಪ್ನಾ ಬುಕ್ ಹೌಸ್’ನ ರಾಘವೇಂದ್ರ ನಾವಲೆ ವೇದಿಕೆಯಲ್ಲಿದ್ದರು.
ಉದ್ಘಾಟಕರು ಹಾಗೂ ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು, ಕು. ಕವಿತಾ ಪ್ರಾರ್ಥನಗೀತೆ ಹಾಡಿದರು, ಗಣೇಶ ಜೋಶಿ ನಿರೂಪಿಸಿದರು.
ವಿಜ್ಞಾನ ವಸ್ತು ಪ್ರದರ್ಶನ, ವಾಣಿಜ್ಯ ವಿಷಯದ ಪ್ರದರ್ಶನಗಳು ಹಾಗೂ ಪುಸ್ತಕಮೇಳವನ್ನು ವೀಕ್ಷಿಸಿದ ಗಣ್ಯರು, ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  

300x250 AD
Share This
300x250 AD
300x250 AD
300x250 AD
Back to top