ಯಲ್ಲಾಪುರ: ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಿಯಾದ ಸಮಯಕ್ಕೆ ಬಸ್ಸುಗಳನ್ನು ಬಿಡುವಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬಸ್‌ಗಳನ್ನು ತಡೆದು ಹಠಾತ್ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಭಾಗದಿಂದ ಪಟ್ಟಣದ ಪದವಿ ಕಾಲೇಜು, ಪಿಯು ಕಾಲೇಜು, ಪ್ರೌಢಶಾಲೆ ಹಾಗೂ ಇನ್ನಿತರ ಪ್ರಾಥಮಿಕ ಶಾಲೆಗಳಿಗೆ ಶಿರಸಿ ರಸ್ತೆ ಹಾಗೂ ಒಳ ರಸ್ತೆ ಕಡೆಯಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತಹ ಯಾವುದೇ ಬಸ್ ವ್ಯವಸ್ಥೆ ಇಲ್ಲ, ಬೇರೆ ಮಾರ್ಗದ ಬಸ್‌ಗಳು ಕೂಡ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ನೂರಾರು ವಿದ್ಯಾರ್ಥಿಗಳು ಅಂಬೇಡ್ಕರ್ ವೃತ್ತದ ಬಳಿ 45 ನಿಮಿಷಕ್ಕೂ ಹೆಚ್ಚು ಅವಧಿಗೆ ಈ ವೃತ್ತದಲ್ಲಿ ಸಂಚರಿಸುವ ಎಲ್ಲ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಮಂಚಿಕೇರಿಯಿoದ 8 ಕಿ.ಮೀ. ಒಳಭಾಗ ಬಿಳಕಿ ಹಾಗೂ ಉಮ್ಮಚಗಿಯಿಂದ 7 ಕಿ.ಮೀ. ಒಳಭಾಗ ಬೈಚಗೋಡು ಗ್ರಾಮಗಳಿಂದ ಹಾಗೂ ಇನ್ನಿತರ ಒಳ ಊರುಗಳಿಂದ ಯಲ್ಲಾಪುರ ಶಾಲಾ- ಕಾಲೇಜಿಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲ. ಬೈಚಗೋಡ್‌ನಿಂದ ಬೆಳಗ್ಗೆ 8ರಿಂದ 9 ಗಂಟೆಗೆ ತೆರಳುವ ಬಸ್ ಮಂಚಿಕೇರಿ ತಲುಪಿ ನಂತರ ಮಜ್ಜಿಗೆಹಳ್ಳಕ್ಕೆ ಹೋಗಿ ಯಲ್ಲಾಪುರ ಪಟ್ಟಣಕ್ಕೆ ತಲುಪುವುದು ತಡವಾಗುತ್ತಿದೆ. ಹೀಗಾಗಿ ನಿಗದಿತ ಸಮಯದಲ್ಲಿ ಶಾಲಾ- ಕಾಲೇಜುಗೆ ತೆರಳುವುದು ತಡವಾಗುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಅಲ್ಲದೆ ಶಾಲಾ- ಕಾಲೇಜುಗಳಿಗೆ ತಡವಾಗಿ ಬರುವ ವಿದ್ಯಾರ್ಥಿಗಳನ್ನು ಕೂಡ ಕ್ಲಾಸ್ ರೂಮಲ್ಲಿ ಶಿಕ್ಷಕರು, ಉಪನ್ಯಾಸಕರು ಸೇರಿಸಿಕೊಳ್ಳುವುದಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಓದಿಗೆ ಹಿನ್ನಡೆಯಾಗುತ್ತಿದೆ ಎಂದು ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಉಪನಿರೀಕ್ಷಕ ಅಮೀನ್ ಎಂ.ಅತ್ತಾರ್, ಎಎಸ್‌ಐ ದೀಪಕ ನಾಯ್ಕ, ಪೊಲೀಸ್ ಸಿಬ್ಬಂದಿ ಬಸವರಾಜ ಡಿ.ಕೆ. ಇನ್ನಿತರರು ಪ್ರತಿಭಟನೆ ನಡೆಸುತ್ತಿದ್ದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನವೊಲಿಸಿ, ನಿಲ್ಲಿಸಿದ್ದ ಬಸ್‌ಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಯಲ್ಲಾಪುರ ಸಾರಿಗೆ ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೇಕರ್, ಬುಧವಾರದಿಂದ ವಿದ್ಯಾರ್ಥಿಗಳ ಅನುಕೂಲಕ್ಕೆ(ಶಾಲಾ ಕಾಲೇಜು ತಲುಪಲು) ತಕ್ಕಂತೆ ಬಸ್‌ಗಳ ಸಮಯವನ್ನು ಬದಲಾವಣೆ ಮಾಡಲಾಗುವುದು. ಈ ಪ್ರಕ್ರಿಯೆಗೆ ಕೆಲ ಸಮಯ ತೆಗೆದುಕೊಳ್ಳಲಿದ್ದು, ಆದ್ಯತೆಯ ಮೇರೆಗೆ ಹಂತ ಹಂತವಾಗಿ ಬಸ್‌ಗಳನ್ನು ಓಡಿಸುತ್ತೇವೆ ಎಂದು ಭರವಸೆ ನೀಡಿದರು. ಬಸ್ಸಿನಲ್ಲಿಯ ಕುಂದು ಕೊರತೆಗಳನ್ನು ಮುಂದಿನ ದಿನಗಳಲ್ಲಿ ನಿವಾರಣೆ ಮಾಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ನಿಲ್ದಾಣ ನಿಯಂತ್ರಕ ಭಂಡಾರಿ ಭರವಸೆ ನೀಡಿದರು.
ಕೆಲ ಸಮಯ ಅಧಿಕಾರಿಗಳು ಹಾಗೂ ಮಕ್ಕಳ ಮಧ್ಯೆ ವಾಗ್ವಾದ ನಡೆಯಿತು. ಸ್ಥಳೀಯ ನಿವಾಸಿಗಳಾದ ಕಿರಣ ಗಾಂವ್ಕರ ಬೊಂಡಕೆಸರ್, ಮಾಧವ ಜಿ.ನಾಯಕ, ಸಂತೋಷ ನಾಯ್ಕ, ಸಚಿನ್ ಎಸ್.ಕೆ. ಮತ್ತಿತರರು ಪ್ರತಿಭಟನಾ ನಿರಂತರ ವಿದ್ಯಾರ್ಥಿಗಳ ಮನವೊಲಿಸಿ ಶಾಲಾ ಕಾಲೇಜಿಗೆ ತೆರಳುವಂತೆ ತಿಳಿಹೇಳಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿ ಮುಖಂಡರುಗಳಾದ, ಗೌತಮ್ ಮೊಗೇರ್ ಮಂಚಿಕೇರಿ, ಮನೋಜ ನಾಯ್ಕ ಮಂಚಿಕೇರಿ, ಆಕಾಶ ಪೂಜಾರಿ ಮಂಚಿಕೇರಿ, ಗೌತಮ ಬಾಂದೇಕರ ಮಂಚಿಕೇರಿ, ಪ್ರದೀಪ ನಾಯ್ಕ ಮಂಚಿಕೇರಿ, ಮಿಥುನ ಮರಾಠೆ, ಮನೋಜ ನಂಬೀಯಾರ್, ಮೇಘಾ ಸಿದ್ದಿ ಬೈಚಗೋಡ್, ಹಲಿಮಾ ಸಾಬ್ ಮಂಚಿಕೇರಿ, ಸರಿತಾ ನಾಯ್ಡು ಮಂಚಿಕೇರಿ, ಲೇಖಾ ಪೂಜಾರಿ ಮಂಚಿಕೇರಿ, ವೀಣಾ ಸಿದ್ದಿ ಮಂಚಿಕೇರಿ, ಉಮಾ ಸಿದ್ದಿ ಬೈಚಗೋಡ್, ನೇತ್ರಾವತಿ ಕುಣಬಿ ಮಂಚಿಕೇರಿ, ಸುನೀತಾ ಪಾಂಡಮಿಸೇ ಮಂಚಿಕೇರಿ ಸೇರಿದಂತೆ ಪದವಿ ಕಾಲೇಜು, ಪಿಯು ಕಾಲೇಜು, ವಿವಿಧ ಪ್ರೌಢಶಾಲೆಗಳು, ಪ್ರಾಥಮಿಕ ಶಾಲೆಯ ಗ್ರಾಮೀಣ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.